ಬೆಂಗಳೂರು : ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನ ಸಂಗೀತ ಕ್ಷೇತ್ರಕ್ಕೇ ದೊಡ್ಡ ನಷ್ಟ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ ಟಿ ರವಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕನ್ನಡ, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ನಟರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಎಳೆಯ ಮಕ್ಕಳಿಗೂ ಸಂಗೀತದ ವೇದಿಕೆ ಕಲ್ಪಿಸಿದವರು ಎಸ್‌ಪಿಬಿ ಎಂದರು.
ಎರಡು ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ. ನಿಧನದಿಂದ ಚಲನಚಿತ್ರ ಕ್ಷೇತ್ರ ಬಡವಾಗಿದೆ. ಕನ್ನಡಿಗರಂತೆಯೇ ಇದ್ದವರು ಅವರು. ಅವರ ಆತ್ಮಕ್ಕೆ ಸದ್ಗತಿ ದೊರಕಲಿ. ಕನ್ನಡ ಸಂಸ್ಕೃತಿ ಇಲಾಖೆಯ ಸಚಿವನಾಗಿ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದಿದ್ದಾರೆ.