ಬೆಂಗಳೂರು: ಶಾಲೆಗಳ ವಾರ್ಷಿಕ ಮಾನ್ಯತೆ ನವೀಕರಣ ನೆಪವೊಡ್ಡಿ ಆರ್‌ಟಿಇ ಶುಲ್ಕ ಮರುಪಾವತಿ ನಿಲ್ಲಿಸಿದರೆ ಸಮಸ್ಯೆಯಾಗುತ್ತದೆ. ಈ ರೀತಿ ಮುಂದುವರೆದರೆ ಬರುವ ವರ್ಷದಿಂದ ಆರ್.ಟಿ.ಇ. ವಿದ್ಯಾರ್ಥಿಗಳ ಪ್ರವೇಶ ನಿಲ್ಲಿಸುವುದು ಅನಿವಾರ್ಯವಾಗುತ್ತದೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ(ರುಪ್ಸಾ) ಹೇಳಿದೆ.
ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾತನಾಡಿ, ರಾಜ್ಯ ಉಚ್ಚ ನ್ಯಾಯಾಲಯ ಈಗಾಗಲೇ ಪ್ರತಿವರ್ಷವೂ ಮಾನ್ಯತೆ ನವೀಕರಣ ಕೇಳುವಂತಿಲ್ಲ ಎಂದು ಹೇಳಿದೆ. ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಯಮ 36 ರೂಲ್ 4 ಸಬ್ ರೂಲ್ 3ರ ಪ್ರಕಾರ ಒಂದು ಬಾರಿ ಬದಲಿ ಮೀಸಲು(ರಿಪ್ಲೇಸ್ಮೆಂಟ್ ರಿಸರ್ವ್). ಆದರೆ 10 ವರ್ಷದವರೆಗೆ ಪುನಃ ಆರ್.ಆರ್ ಕೇಳುವ ಹಾಗಿಲ್ಲ ಎಂದು ಹೇಳಿದೆ. ಆದರೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅಧಿಕಾರಿಗಳು ಪ್ರತಿವರ್ಷ ಆರ್.ಆರ್ಗೆ ಒತ್ತಾಯಿಸುತ್ತಿದ್ದಾರೆ.
ಆರ್.ಆರ್ ಇದ್ದರೆ ಮಾತ್ರ ಆರ್.ಟಿ.ಇ. ಮರುಪಾವತಿ ಎನ್ನುತ್ತಿದ್ದಾರೆ. ಇದರಿಂದಾಗಿ ಈಗಾಗಲೇ ವರ್ಷಪೂರ್ತಿ ಆರ್.ಟಿ.ಇ. ಕೋಟಾದಲ್ಲಿ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ನಿಂತಿದೆ. ಪರಿಣಾಮ, ಖಾಸಗಿ ಶಾಲೆಗಳು ಆರ್ಥಿಕ ಬಿಕ್ಕಟ್ಟಿನಲ್ಲಿವೆ. ಇದೇ ರೀತಿ ಮುಂದುವರೆದರೆ 11,000 ಖಾಸಗಿ ಶಾಲೆಗಳು ಸಭೆ ಸೇರಿ 2022 - 23ರ ಶೈಕ್ಷಣಿಕ ವರ್ಷದಿಂದ ಆರ್.ಟಿ.ಇ. ಕೋಟಾದಡಿ ಪ್ರವೇಶ ನಿರಾಕರಿಸುವ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಪ್ರವೇಶ ಪಡೆದು ಅಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮುಂದಿನ ಶಾಲಾ ಪ್ರವೇಶವನ್ನು ನಿರಾಕರಿಸಲು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇದರಿಂದ ಆರ್.ಟಿ.ಇ. ಕೋಟಾದಡಿ ವಿದ್ಯಾಭ್ಯಾಸ ಪಡೆಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಬದುಕು ಮರೀಚಿಕೆಯಾಗುತ್ತದೆ ಅಂತ ತಿಳಿಸಿದ್ದಾರೆ.
ಇದನ್ನೂ ಓದಿ: ದ್ವಿತೀಯ ಪಿಯು ಪರೀಕ್ಷೆಗೆ ತಯಾರಿ ಹೇಗೆ? ಆರೋಗ್ಯದ ಕಾಳಜಿ ಎಷ್ಟು ಅಗತ್ಯ? ಇಲ್ಲಿದೆ ಉಪಯುಕ್ತ ಟಿಪ್ಸ್!