ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಆಕಾಂಕ್ಷಿಗಳು ಒಬ್ಬೊಬ್ಬರಾಗಿ ತಮ್ಮ ಅಪೇಕ್ಷೆ ವ್ಯಕ್ತಪಡಿಸಿ ರಾಜ್ಯಾಧ್ಯಕ್ಷ ಕುರ್ಚಿಗೆ ಕರ್ಚೀಫ್ ಹಾಕುತ್ತಿದ್ದಾರೆ. ಆದರೆ ರಾಜ್ಯಾಧ್ಯಕ್ಷರ ಅವಧಿ ಮುಕ್ತಾಯದ ದಿನಾಂಕದ ಬಗ್ಗೆ ಬಿಜೆಪಿಯಲ್ಲೇ ಗೊಂದಲ ಮೂಡಿದೆ.
ಮೂರು ವರ್ಷದ ಅವಧಿ ಮುಗಿದ ನಂತರ ಸಹಜವಾಗಿ ಹೊಸಬರ ನೇಮಕವಾಗಲಿದೆ ಎಂದು ಯಡಿಯೂರಪ್ಪ ಆದಿಯಾಗಿ ಎಲ್ಲಾ ನಾಯಕರು ಹೇಳುತ್ತಿದ್ದರೆ ನನ್ನ ಅವಧಿ ಮುಗಿದಿಲ್ಲ ಎಂದು ಕಟೀಲ್ ಹೇಳುತ್ತಿದ್ದಾರೆ. ಈ ಎಲ್ಲದರ ನಡುವೆ ಹಲವು ಹೆಸರುಗಳು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮುಂಚೂಣಿಗೆ ಬಂದಿದ್ದು ಚರ್ಚೆಯ ಕಾವು ಹೆಚ್ಚುವಂತೆ ಮಾಡಿದೆ.
ರಾಜ್ಯ ಬಿಜೆಪಿಗೆ ನೂತನ ಸಾರಥಿ ನೇಮಕದ ವಿಷಯ ಕೇಸರಿಪಡೆಯಲ್ಲಿ ತೀವ್ರ ಚರ್ಚಿತ ವಿಷಯವಾಗಿದೆ. 2019 ರ ಆಗಸ್ಟ್ 20 ರಂದು ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಹೈಕಮಾಂಡ್ ಆದೇಶ ಹೊರಡಿಸಿತ್ತು. ಆದರೆ, ಪಕ್ಷದ ನಿಯಮದಂತೆ ಚುನಾಯಿತ ಅಧ್ಯಕ್ಷರಾಗಿ ಕಟೀಲ್ ಆಯ್ಕೆಯಾಗಿದ್ದು, 2020ರ ಜನವರಿ 16 ರಂದು. ಅಂದು ನಡೆದ ರಾಜ್ಯಾಧ್ಯಕ್ಷರ ಚುನಾವಣೆಗೆ ಕಟೀಲ್ ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಅವರ ಆಯ್ಕೆಯನ್ನು ಅವಿರೋಧವಾಗಿ ಪ್ರಕಟಿಸಲಾಯಿತು. ಮೂರು ವರ್ಷದ ಅವಧಿಗೆ ಕಟೀಲ್ ನೇಮಕವನ್ನು ಪ್ರಕಟಿಸಲಾಯಿತು. ಅಂದೇ ಅರಮನೆ ಮೈದಾನದಲ್ಲಿ ಸಮಾರಂಭ ನಡೆಸಿ ಮುಂದಿನ ಮೂರು ವರ್ಷ ಕಟೀಲ್ ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಲಿದ್ದಾರೆ, ಪಕ್ಷವನ್ನು ಕಟ್ಟುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಘೋಷಿಸಿದ್ದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ್ದ ಕಟೀಲ್, ಮುಂದಿನ ಮೂರು ವರ್ಷದ ಅವಧಿಗೆ ನನ್ನನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದು, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು 2020ರ ಜನವರಿ 16 ರಂದು ವೇದಿಕೆ ಮೇಲಿನ ಭಾಷಣದಲ್ಲಿ ಹೇಳಿದ್ದರು.
ಇನ್ನೂ ನನ್ನ ಅವಧಿ ಮುಗಿದಿಲ್ಲ: ಪಕ್ಷದ ನಿಯಮದ ಪ್ರಕಾರ ಕಟೀಲ್ ಅವಧಿ 2023 ರ ಜನವರಿ 15 ರವರೆಗೂ ಇದೆ. ಸಂಕ್ರಾಂತಿಯ ಪರ್ವಕಾಲದವರೆಗೂ ಕಟೀಲ್ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವ ಅವಕಾಶವನ್ನು ಪಕ್ಷದ ಸಂವಿಧಾನದಂತೆ ಪಡೆದುಕೊಂಡಿದ್ದಾರೆ. ಹಾಗಾಗಿಯೇ ನಳಿನ್ ಕುಮಾರ್ ಕಟೀಲ್ ನನ್ನ ಅವಧಿ ಇನ್ನೂ ಮುಗಿದಿಲ್ಲ ಎಂದಿದ್ದಾರೆ. ವಾಸ್ತವದಲ್ಲಿ ಕಟೀಲ್ ಹೇಳುತ್ತಿರುವುದು ಸತ್ಯವೇ. ಅವರ ಅವಧಿ ಇನ್ನೂ ಮುಗಿದಿಲ್ಲ. ಅವರಿಗೆ ಇನ್ನು ಐದು ತಿಂಗಳ ಅವಕಾಶ ಇದೆ. ಒಂದು ವೇಳೆ ಅವರ ಅವಧಿ ಮುಗಿದಿದ್ದರೆ ಅವರನ್ನು ಮತ್ತಷ್ಟು ಸಮಯ ಮುಂದುವರೆಸುವ ಆದೇಶವನ್ನು ಹೈಕಮಾಂಡ್ ಹೊರಡಿಸಬೇಕಿತ್ತು. ಇಲ್ಲವೇ ಹೊಸಬರ ನೇಮಕ ಮಾಡಬೇಕಾಗಿತ್ತು. ಆದರೆ, ಇನ್ನು ಐದು ತಿಂಗಳು ಸಮಯಾವಕಾಶವಿರುವುದರಿಂದಲೇ ಹೈಕಮಾಂಡ್ ಅಂತಹ ಯಾವುದೇ ಹೆಜ್ಜೆ ಇಟ್ಟಿಲ್ಲ.
ಸದ್ಯಕ್ಕೆ ಕಟೀಲ್ ಸ್ಥಾನ ಅಬಾಧಿತವಾದರೂ ಅದು ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಅವಲಂಬಿಸಿರಲಿದೆ. ಯಾವುದೇ ರಾಜ್ಯಾಧ್ಯಕ್ಷರನ್ನು ಯಾವಾಗ ಬೇಕಾದರೂ ಬದಲಾವಣೆ ಮಾಡುವ ಅವಕಾಶ ಹೈಕಮಾಂಡ್ಗಿದೆ. ಹಾಗಾಗಿಯೇ ಈಗ ರಾಜ್ಯಾಧ್ಯಕ್ಷರ ಬದಲಾವಣೆ ವಿಷಯ ಚರ್ಚೆಗೆ ಬಂದಿದೆ. ಆದರೆ, ಐದು ತಿಂಗಳ ಮೊದಲೇ ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಆದರೆ, ಚುನಾವಣಾ ವರ್ಷ ಎನ್ನುವ ಕಾರಣಕ್ಕೆ ಬದಲಾವಣೆ ಮಾಡಲು ಮುಂದಾದರೆ ಮಾತ್ರ ಅಂತಹ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿರುವ ಹೆಸರುಗಳು: ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವು ಹಿರಿಯ ನಾಯಕರ ಹೆಸರುಗಳು ಕೇಳಿಬಂದಿವೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಸಚಿವ ಸುನೀಲ್ ಕುಮಾರ್ ಹೆಸರುಗಳು ಆಗಾಗ ಬಿಜೆಪಿ ಪಡಸಾಲೆಯಲ್ಲಿ ಕೇಳಿಬರುತ್ತಿದ್ದು, ಇದೀಗ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಹೆಸರು ಸಹ ಕೇಳಿಬರುತ್ತಿದೆ.
ಕಟ್ಟರ್ ಹಿಂದುತ್ವವಾದಿ, ಪಕ್ಷವನ್ನು ಮೊದಲಿನಿಂದಲೇ ಸಮರ್ಥಿಸಿಕೊಂಡು ಬರುತ್ತಿರುವ ನಾಯಕ, ಪಕ್ಷದ ಅಜೆಂಡಾದಂತೆ ನಡೆದುಕೊಳ್ಳುವ ಕಲೆ ಕರಗತವಾಗಿದೆ. ಹಿಂದುತ್ವ ಅಜೆಂಡಾದ ಮಾಲ್ ಇಮೇಜ್ ಇರುವ ಕಾರಣಕ್ಕೆ ಸಿ.ಟಿ ರವಿ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯಡಿಯೂರಪ್ಪ ಆಪ್ತ ಬಳಗದಲ್ಲಿದ್ದವರು. ಮಹಿಳೆಗೆ ಅವಕಾಶ ಕಲ್ಪಿಸಬೇಕು ಎಂದು ಪರಿಗಣಿಸಿದಲ್ಲಿ ಸದ್ಯದ ಮಟ್ಟಿಗೆ ರಾಜ್ಯ ಬಿಜೆಪಿಯಲ್ಲಿ ಮುಂಚೂಣಿಯಲ್ಲಿರುವ ಅನುಭವಿ ರಾಜಕಾರಣಿ ಆಗಿದ್ದಾರೆ. ಹಾಗಾಗಿ ಅವರಿಗೆ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ.
ಅತ್ಯುತ್ತಮ ಸಂಘಟನಾ ಚತುರನಾಗಿರುವ ಕಾರಣಕ್ಕೆ ಅರವಿಂದ ಲಿಂಬಾವಳಿ ಅವರಿಗೆ ಹೈಕಮಾಂಡ್ ಮಣೆ ಹಾಕಲಿದೆ ಎನ್ನಲಾಗುತ್ತಿದೆ. ಕಟೀಲ್ ನೇಮಕದ ಸಮಯದಲ್ಲೇ ಲಿಂಬಾವಳಿ ಹೆಸರು ಕೇಳಿಬಂದಿತ್ತು. ಹಾಗಾಗಿ ಅವರಿಗೆ ಈಗ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ. ಇನ್ನು ಸರಳ ಸಜ್ಜನಿಕ, ಸಂಘದ ಹಿನ್ನೆಲೆ, ಸುಸಂಸ್ಕೃತ ರಾಜಕಾರಣಿಯಾಗಿ ಕ್ಲೀನ್ ಇಮೇಜ್ ಇರಿಸಿಕೊಂಡಿರುವ ಕಾರಣಕ್ಕೆ ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ಸಚಿವ ಸುನೀಲ್ ಕುಮಾರ್ ಅವರನ್ನು ಪರಿಗಣಿಸಲಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ವಿಜಯೇಂದ್ರ ಹೆಸರನ್ನು ಮಾತ್ರ ಪಕ್ಷದಲ್ಲಿ ಅಷ್ಟಾಗಿ ಚರ್ಚಿಸಿಲ್ಲ. ಆದರೆ, ಅವರೂ ರೇಸ್‌ನಲ್ಲಿ ಇರುವುದಂತೂ ಸತ್ಯ.
ಆಕಾಂಕ್ಷಿಗಳ ಅಭಿಪ್ರಾಯ: ಸದ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹೈಕಮಾಂಡ್ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಟಿ ರವಿ ಪಕ್ಷ ವಹಿಸುವ ಜವಾಬ್ದಾರಿ ನಿರ್ವಹಿಸುವುದಷ್ಟೇ ನನ್ನ ಕೆಲಸ ಎಂದಿದ್ದಾರೆ.
ಯಡಿಯೂರಪ್ಪ ಸಂಪುಟದಲ್ಲಿ ಸಚಿವನಾಗಿದ್ದು, ಪಕ್ಷ ಸಂಘಟನೆಗೆ ಬರುವಂತೆ ತಿಳಿಸಿತು. ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಹೇಳಿದಂತೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡೆ. ಈಗ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಳ್ಳಿ ಎಂದರೆ ಅದನ್ನು ಪಾಲಿಸುತ್ತೇನೆ. ನನಗೆ ಪಕ್ಷ ಮೊದಲು, ಸರ್ಕಾರ ನಂತರ, ನಾನು ಪಕ್ಷದ ಕಾರ್ಯಕರ್ತ, ಪಕ್ಷ ಹೇಳಿದ್ದನ್ನು ಮಾಡುವುದಷ್ಟೇ ನನ್ನ ಕೆಲಸ ಎಂದು ಯಾವುದಕ್ಕೂ ನಾನು ಸಿದ್ಧ ಎನ್ನುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.
ಸಚಿವ ಸುನೀಲ್ ಕುಮಾರ್ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಸಿದ್ಧ ಎಂದು ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ರಾಜ್ಯಾಧ್ಯಕ್ಷರಾಗಲು ಹತ್ತಾರು ಜನರಿಗೆ ಯೋಗ್ಯತೆ ಇದೆ. ಒಂದು ವೇಳೆ ನನಗೆ ನೀಡಿದರೆ ಜವಾಬ್ದಾರಿ ನಿರ್ವಹಿಸಲು ಸಿದ್ಧನಿದ್ದೇನೆ, ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷ ಟಿಕೆಟ್ ನೀಡಿತು, ಗೆದ್ದೆ ಹಾಗೆಯೇ ಈಗ ರಾಜ್ಯಾಧ್ಯಕ್ಷರಾಗಲು ಸೂಚಿಸಿದರೆ ಅದನ್ನು ಪಾಲಿಸುತ್ತೇನೆ ಎಂದಿದ್ದಾರೆ. ಆ ಮೂಲಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಸಹ ಸಿದ್ಧ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.
ಬಿಎಸ್ವೈ ಪುತ್ರ ರಂಗ ಪ್ರವೇಶ: ಇನ್ನು ನೂತನ ರಾಜ್ಯಾಧ್ಯಕ್ಷರ ನೇಮಕವಾಗಲಿದೆ ಎನ್ನುವ ಗುಸು ಗುಸು ಹರಿದಾಡಲು ಶುರುಮಾಡುತ್ತಿದ್ದಂತೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ರಂಗ ಪ್ರವೇಶ ಮಾಡಿದ್ದಾರೆ.
ವಿಧಾನ ಸಭೆ ಉಪ ಚುನಾವಣಾ ಟಿಕೆಟ್,ಪರಿಷತ್ ಟಿಕೆಟ್ ಕೈತಪ್ಪಿದ್ದು, ಸಂಪುಟಕ್ಕೆ ಸೇರುವುದರಿಂದಲೂ ವಂಚಿತರಾಗಿರುವ ವಿಜಯೇಂದ್ರ ಪಕ್ಷದಲ್ಲಾದರೂ ಉನ್ನತ ಸ್ಥಾನ ಪಡೆದುಕೊಳ್ಳಬೇಕು ಎಂದು ನಿರ್ಧರಿಸಿದ್ದು, ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಪರಿಣಾಮ ಯಡಿಯೂರಪ್ಪ ಮೂಲಕ ಲಾಬಿ ಶುರು ಮಾಡಿದ್ದಾರೆ ಎನ್ನಲಾಗಿದೆ. ರಾಜ್ಯಾಧ್ಯಕ್ಷ ಸ್ಥಾನದ ಅವಕಾಶದ ನಿರೀಕ್ಷೆಯಲ್ಲಿರುವ ವಿಷಯವನ್ನು ಸ್ವತಃ ವಿಜಯೇಂದ್ರ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಮಾಧ್ಯಮಗಳ ಮುಂದೆಯೇ ಅಧ್ಯಕ್ಷ ಸ್ಥಾನಕ್ಕೆ ಸಿದ್ಧವಿರುವುದಾಗಿ ಹೇಳಿದ್ದಾರೆ. ಈಗ ನೀಡಿರುವ ಉಪಾಧ್ಯಕ್ಷ ಸ್ಥಾನವನ್ನು ಸಂತೋಷದಿಂದ ನಿರ್ವಹಿಸುತ್ತಿದ್ದೇನೆ. ಒಂದು ವೇಳೆ ಅಧ್ಯಕ್ಷ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ, ಕೊಟ್ಟ ಜವಾಬ್ದಾರಿಯನ್ನು ಸಂತೋಷದಿಂದ ನಿರ್ವಹಿಸುತ್ತೇನೆ ಎಂದಿದ್ದಾರೆ.
ಇಷ್ಟೆಲ್ಲಾ ಗುಸುಗುಸು ನಡೆಯುತ್ತಿದ್ದರೂ ಬಿಜೆಪಿ ಹೈಕಮಾಂಡ್ ಈ ಕುರಿತು ಯಾವುದೇ ಸ್ಪಷ್ಟನೆ ನೀಡದಿರುವುದು ರಾಜ್ಯ ಬಿಜೆಪಿಯಲ್ಲಿ ಗೊಂದಲ ಮುಂದುವರೆಯುವುದಕ್ಕೆ ಪ್ರಮುಖ ಕಾರಣವಾಗಿದೆ. ಕಟೀಲ್ ಅವದಿ ಬಗ್ಗೆ,ಹೊಸಬರ ನೇಮಕದ ಬಗ್ಗೆ ಬಾಯಿ ಬಿಡದ ಹೈಕಮಾಂಡ್ ಸೈಲೆಂಟ್ ಆಗಿದೆ ಹಾಗಾಗಿ ಯಾವಾಗ ಏನು ಬೇಕಾದರೂ ಆಗಬಹುದು ಎನ್ನುವ ವಾತಾವರಣ ರಾಜ್ಯ ಬಿಜೆಪಿಯಲ್ಲಿದೆ.
ಇಂದು ಉತ್ತರ ಪ್ರದೇಶ ಮತ್ತು ತ್ರಿಪುರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ. ರಾಜ್ಯದಲ್ಲಿಯೂ ಬದಲಾವಣೆಯಾಗಬೇಕಿದ್ದರೆ ಇಂದೇ ಹೊಸಬರ ನೇಮಕ ಮಾಡುವ ಸಾಧ್ಯತೆ ಇತ್ತು. ಆದರೆ, ಅಂತಹ ಸ್ಥಿತಿ ಸಧ್ಯಕ್ಕೆ ಇಲ್ಲ ಎನ್ನುವ ಮಾತುಗಳು ಬಿಜೆಪಿ ಪಾಳಯದಲ್ಲೇ ಕೇಳಿಬರುತ್ತಿವೆ. ಇದರ ಜೊತೆ ಜೊತೆಯಲ್ಲೇ ಸೆಪ್ಟಂಬರ್ 11 ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಸಭೆ ನಂತರ ಹೊಸ ರಾಜ್ಯಾಧ್ಯಕ್ಷ ನೇಮಕವಾಗಲಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.
ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ ಎನ್ನುವ ಗಾದೆ ಮಾತಿನಂತೆ ರಾಜ್ಯಾಧ್ಯಕ್ಷ ಸ್ಥಾನ ಖಾಲಿಯಾಗುವ ಮೊದಲೇ ಹಲವರು ಕರ್ಚೀಫ್ ಹಾಕುತ್ತಿದ್ದಾರೆ. ಈ ವಿಚಾರದಲ್ಲಿ ಹೈಕಮಾಂಡ್ ಯಾವ ನಡೆ ಅನುಸರಿಸಲಿದೆ. ರಾಜ್ಯಾಧ್ಯಕ್ಷರ ಬದಲಾವಣೆಯಾಗಲಿದೆಯಾ? ಕಟೀಲ್ ಮುಂದುವರೆಯಲಿದ್ದಾರಾ? ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಕೆಂಪಣ್ಣ ಸಿನಿಮಾದ ನಿರ್ದೇಶಕ, ನಿರ್ಮಾಪಕರ ವಿವರ ಸದ್ಯದಲ್ಲೇ ಹೊರಬೀಳಲಿದೆ: ಸಿ ಟಿ ರವಿ