ಬೆಂಗಳೂರು: ರಾಯಚೂರು ಕಲ್ಲಿದ್ದಲು ಶಾಖೋತ್ಪನ್ನ ಕೇಂದ್ರ (ಆರ್ಟಿಪಿಎಸ್) ಬೂದಿ ಸಾಗಣೆಗೆ ಜನವಸತಿ ಪ್ರದೇಶದಲ್ಲಿ ರಸ್ತೆ ನಿರ್ಮಿಸಲು ಮುಂದಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ರಾಯಚೂರಿನ ದೇವಸೂಗೂರು ನಿವಾಸಿ ಶಿವರಾಜ್ ಸೇರಿದಂತೆ 16 ಮಂದಿ ಸ್ಥಳೀಯ ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲ ವಿಘ್ನೇಶ್ವರ್ ಎಸ್. ಶಾಸ್ತ್ರಿ ಅವರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಸರ್ಕಾರದ ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ, ಕೆಪಿಸಿಎಲ್, ಆರ್ಟಿಪಿಎಸ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್ ಜಾರಿ ಮಾಡಿತು. ಹಾಗೆಯೇ ರ‍್ಯಾಂಪ್ ನಿರ್ಮಿಸುವ ಸಂಬಂಧ ಕರೆದಿರುವ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬಹುದಾದರೂ ಟೆಂಡರ್ ಕೆಲಸವನ್ನು ನ್ಯಾಯಾಲಯದ ಅನುಮತಿ ಇಲ್ಲದೆ ಆರಂಭಿಸಬಾರದು ಎಂದು ಮಧ್ಯಂತರ ಆದೇಶ ನೀಡಿದೆ. ಅಲ್ಲದೇ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿತು.
ಅರ್ಜಿದಾರರ ಕೋರಿಕೆ: ರಾಯಚೂರು ಥರ್ಮಲ್ ಪವರ್ ಸ್ಟೇಷನ್ (ಆರ್ಟಿಪಿಎಸ್), ಯರಮರಸ್ ಥರ್ಮಲ್ ಪವರ್ ಸ್ಟೇಷನ್ (ವೈಟಿಪಿಎಸ್)ಗಳು ರಾಯಚೂರು ತಾಲೂಕಿನ ಶಕ್ತಿನಗರ ಹಾಗೂ ದೇವಸೂಗೂರಿನಿಂದ 3 ಕಿ.ಮೀ. ರೇಡಿಯಸ್ನಲ್ಲಿವೆ. ಇಲ್ಲಿ ವಿದ್ಯುತ್ ಉತ್ಪಾದಿಸಲು ಬಳಸುವ ಕಲ್ಲಿದ್ದಲಿನಿಂದ ಸೃಷ್ಟಿಯಾಗುವ ಬೂದಿಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಪ್ರತಿ ದಿನ ಅಂದಾಜು 7ರಿಂದ 8 ಮೆಟ್ರಿಕ್ ಟನ್ ಬೂದಿ ಸೃಷ್ಟಿಯಾಗುತ್ತಿದ್ದು, ಅದನ್ನು ಪೈಪ್ ಲೈನ್ ಮೂಲಕ ಹೊಂಡಗಳಿಗೆ ಹೊರ ಬಿಡಲಾಗುತ್ತಿದೆ.
ಇತ್ತೀಚೆಗೆ ಬೂದಿಯನ್ನು ಸಿಮೆಂಟ್ ತಯಾರಿಕಾ ಸಂಸ್ಥೆಗಳಿಗೆ ಮಾರಾಟ ಮಾಡಲಾಗುತ್ತಿದ್ದು, ಲಾರಿಗಳ ಮೂಲಕ ತೆಗೆದುಕೊಂಡು ಹೋಗಲಾಗುತ್ತಿದೆ. ಆದರೆ, ಲಾರಿಗಳಲ್ಲಿ ತುಂಬಿ ಟಾರ್ಪಲ್ ಹೊದಿಸಿ ಸಾಗಿಸುವಾಗ ಬೀದಿಗಳಲ್ಲಿ ಹೊರ ಚೆಲ್ಲುವ ಬೂದಿ ಗಾಳಿಯಲ್ಲಿ ಬೆರೆತು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿದೆ. ಅಸ್ತಮಾ, ಕಣ್ಣು ಉರಿ, ಶ್ವಾಸಕೋಶ ಸಮಸ್ಯೆಯಾದ ಸಿಲಿಕೋಸಿಸ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ.
ಓದಿ:ವಿಸ್ಟ್ರಾನ್ ಐಫೋನ್ ಘಟಕ ದಾಂಧಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು
ಈ ಸಂಬಂಧ ಸ್ಥಳೀಯರು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಸಿಎಂ, ಜಿಲ್ಲಾಧಿಕಾರಿ, ತಹಶೀಲ್ದಾರ್ಗೂ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಒಮ್ಮೆ ಘಟಕಗಳ ಎಂಡಿಗಳಿಗೆ ಪತ್ರ ಬರೆದು ಸಮಸ್ಯೆ ಸರಿಪಡಿಸಲು ಸೂಚಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ನಡುವೆ ಆರ್ಟಿಪಿಎಸ್ 2021ರ ಫೆ. 9ರಂದು ಬೂದಿ ಹೊಂಡದಿಂದ ರಾಷ್ಟ್ರೀಯ ಹೆದ್ದಾರಿವರೆಗೆ ರ‍್ಯಾಂಪ್ ನಿರ್ಮಿಸಲು ಟೆಂಡರ್ ಕರೆದಿದೆ. ಈ ರ‍್ಯಾಂಪ್ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳದಲ್ಲಿ ಜನವಸತಿ ಇದ್ದು ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದೆ.
ರ‍್ಯಾಂಪ್ ನಿರ್ಮಾಣ ಟೆಂಡರ್ ರದ್ದುಗೊಳಿಸಿ, ಬದಲಿ ರಸ್ತೆ ನಿರ್ಮಿಸಿಕೊಳ್ಳಲು ದೇವಸೂಗೂರು ಶಾಸಕ ಡಾ. ಎಸ್.ಶಿವರಾಜ್ ಪಾಟೀಲ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅದರಂತೆ ಸಿಎಂ ಕೂಡ ಕೆಪಿಸಿಎಲ್ಗೆ ಬದಲಿ ಮಾರ್ಗ ಕಂಡುಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಕೆಪಿಸಿಎಲ್ ಮತ್ತು ಆರ್ಟಿಪಿಎಸ್ ಬದಲಿ ಯೋಜನೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ತಮ್ಮದೇ ಯೋಜನೆ ಜಾರಿಗೆ ಟೆಂಡರ್ ಪ್ರಕ್ರಿಯೆ ಮುಂದುವರೆಸಿದ್ದಾರೆ. ಆದ್ದರಿಂದ ಟೆಂಡರ್ ರದ್ದುಗೊಳಿಸಬೇಕು. ಅರ್ಜಿ ಇತ್ಯರ್ಥವಾಗವರೆಗೆ ಯಾವುದೇ ಕ್ರಮ ಜರುಗಿಸದಂತೆ ಆರ್ಟಿಪಿಎಸ್ಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.