ಮಂಗಳೂರು: "ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗು ಉಳ್ಳಾಲ ಪೊಲೀಸರ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ ಕಾರಣಕ್ಕೆ ನನಗೆ ಪೊಲೀಸರು ಮಾನಸಿಕ ಕಿರುಕುಳ ನೀಡುತಿದ್ದಾರೆ" ಎಂದು ಆರ್‌ಟಿಐ ಕಾರ್ಯಕರ್ತ ಮೊಹಮ್ಮದ್ ಕಬೀರ್ ಆರೋಪಿಸಿದ್ದಾರೆ. "ನಾನು ಈ ಮೂವರ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ಆದರೆ ಪೊಲೀಸ್ ಆಯುಕ್ತರ ಮೂಲಕವೇ ದೂರಿನ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ. ಅವರೇ ತನಿಖೆ ನಡೆಸಿದರೆ ನ್ಯಾಯ ಸಿಗುವುದು ಹೇಗೆ?" ಎಂದು ಹೇಳಿದರು.
"ಎರಡನೇ ಬಾರಿ ನನಗೆ ವಿಚಾರಣೆಗೆ ಹಾಜರಾಗಲು ಕಳುಹಿಸಿದ ನೋಟಿಸ್ಗೆ ಉತ್ತರ ನೀಡಿದ್ದು, ನಿಮ್ಮ ವಿಚಾರಣೆಗೆ ನನಗೆ ಬರಲಾಗುವುದಿಲ್ಲ ಎಂದಿದ್ದೆ. ಲೋಕಾಯುಕ್ತ ಅಧಿಕಾರಿಗಳು ಕರೆದು ವಿಚಾರಣೆ ನಡೆಸಿದರೆ ನಾನು ಸಹಕಾರ ಕೊಡುತ್ತೇನೆ. ಪೊಲೀಸ್ ಆಯುಕ್ತರು ಮಂಗಳೂರಿಗೆ ಬಂದ ನಂತರ ಅವರ ವ್ಯಾಪ್ತಿಯ ಪ್ರತಿ ಠಾಣೆಯಲ್ಲೂ ಭ್ರಷ್ಟಾಚಾರ ತುಂಬಿದೆ. ಜನರು ಠಾಣೆಗೆ ಹೋಗಲು ಭಯ ಪಡುತ್ತಿದ್ದಾರೆ. ಅಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದೆ" ಎಂದು ದೂರಿದರು.
"ಮನೆಯಲ್ಲಿ ಹೆಂಡತಿ, ಮಕ್ಕಳು ಭಯಪಡುತ್ತಿದ್ದಾರೆ. ಆರೋಪಿಗಳ ಬಳಿಯೇ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ವಿಚಾರಣೆ ಸಂದರ್ಭದಲ್ಲಿ ಅವರಿಗೆ ಮಾಹಿತಿ ಕೊಟ್ಟರೆ, ಅವರು ಅದನ್ನು ಮುಚ್ಚಿ ಹಾಕುತ್ತಾರೆ. ಆಗ ಲೋಕಾಯುಕ್ತಕ್ಕೆ ತಿಳಿಸಲು ಏನೂ ಇರದಂತಾಗುತ್ತದೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ನನ್ನಲ್ಲಿ ಇವೆ, ಕೆಲವನ್ನು ಕೊಟ್ಟಿದ್ದೇನೆ. ಇನ್ನೂ ಕೆಲವರು ತಮಗೆ ಆಗಿರುವ ಅನ್ಯಾಯದ ಬಗ್ಗೆ ನನ್ನ ಮುಂದೆ ಹೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರತ್ಯೇಕವಾಗಿ ವಿಚಾರಣೆ ನಡೆಸಿದರೆ ವಿಚಾರಣೆಗೆ ಹಾಜರಾಗಲು ಸಿದ್ದ. ಆದರೆ ವಿಚಾರಣೆಗೆ ಪೊಲೀಸ್ ಕಮಿಷನರ್ ಬರದಂತೆ ಇರಬೇಕು. ಲೋಕಾಯುಕ್ತ ಯಾವುದೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮತ್ತು ತಮಗೆ ನ್ಯಾಯ ಸಿಗದಿದೇ ಹೋದಲ್ಲಿ ಹೈಕೋರ್ಟ್ಗೆ ಹೋಗುತ್ತೇನೆ" ಎಂದು ಅವರು ತಿಳಿಸಿದ್ದಾರೆ.
"ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ನಡೆಯುವುದು ಎಲ್ಲರಿಗೂ ಗೊತ್ತಿರುವ ವಿಷಯ. ಡ್ರಗ್ಸ್, ಚಿನ್ನ ಮತ್ತು ವೇಶ್ಯಾವಾಟಿಕೆ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಎಲ್ಲಾ ವಿಚಾರಗಳನ್ನು ಲೋಕಾಯುಕ್ತ ತನಿಖೆಯ ಸಮಯದಲ್ಲಿ ಹೇಳುತ್ತೇನೆ. ಪ್ರತಿ ತಿಂಗಳ 1 ರಿಂದ 6 ವರೆಗೆ ಮರಳು ಮಾಫಿಯಾದವರು ಇನ್ಸ್ ಪೆಕ್ಟರ್ ಮನೆಗೆ ಹೋಗಿ ಹಣ ನೀಡುತ್ತಿದ್ದಾರೆ. ಸ್ಟೇಷನ್ ಒಳಗೆ ಕೂಡ ಹಣ ಹೋಗುತ್ತಿದೆ. ಈ ಬಗ್ಗೆ ಸಿಸಿಟಿವಿ ಫೂಟೇಜ್ ಕೊಡಲು ಕೇಳಿದ್ದೇನೆ. ಆದರೆ ಅದನ್ನು ಈವರೆಗೂ ಕೊಟ್ಟಿಲ್ಲ. ಭ್ರಷ್ಟಾಚಾರ ನಡೆಸುವ ಅಧಿಕಾರಿಗಳು ಇಲ್ಲಿಂದ ಹೋಗಬೇಕು" ಎಂದು ಆಗ್ರಹಿಸಿದರು.
ಇದನ್ನೂ ಓದಿ: ಭದ್ರಾವತಿಯ ವಿಐಎಸ್ಎಲ್ ಮುಚ್ಚುವ ನಿರ್ಧಾರ ಹಿಂಪಡೆಯಿರಿ: ಪ್ರಧಾನಿಗೆ ಸಿದ್ದರಾಮಯ್ಯ ಮನವಿ