ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮೊದಲ ಹಾಗೂ ಎರಡನೇ ಅಲೆಯಿಂದ ಜರ್ಜರಿತವಾಗಿರುವ ಜನ್ರಿಗೆ ಇದೀಗ ಮೂರನೇ ಅಲೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಕ್ಕದ ಕೇರಳ-ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚುತ್ತಿದೆ. ಆರ್ಟಿ ನಂಬರ್ ಹೆಚ್ಚಳವಾಗ್ತಿರುವುದು ಕರ್ನಾಟಕದಲ್ಲಿ ಮೂರನೇ ಅಲೆಗೆ ಕಾರಣವಾಗಲಿದ್ಯಾ ಅನ್ನೋ ಆತಂಕ ಶುರುವಾಗಿದೆ.
ಜುಲೈ ತಿಂಗಳಿನಲ್ಲಿ ಕರ್ನಾಟಕದಲ್ಲಿ ಆರ್ಟಿ ನಂಬರ್ ಹೆಚ್ಚಳವಾಗಿದೆ. RT ನಂಬರ್ ಅಂದರೆ ರೀ ಪ್ರೊಡಕ್ಟೀವ್ ನಂಬರ್ ಎಂದರ್ಥ. ಅಂದರೆ ಒಬ್ಬರಿಂದ ಸೋಂಕು ಎಷ್ಟು ಮಂದಿಗೆ ಹರಡುತ್ತಿದೆ ಎನ್ನುವುದರ ಸೂಚ್ಯಂಕ ಇದಾಗಿದೆ. ಜುಲೈ ಅಂತ್ಯಕ್ಕೆ ಕರ್ನಾಟಕದ RT ನಂಬರ್ 1.11ಕ್ಕೆ ಏರಿಕೆ ಆಗಿದೆ. 100 ಜನರಿಗೆ ಸೋಂಕು ತಗುಲಿದರೆ, ಅವರಿಂದ 110 ಮಂದಿಗೆ ಸೋಂಕು ಹರಡುತ್ತಿದೆ.
ಜುಲೈ ಮೊದಲ ವಾರದಲ್ಲಿ ರಾಜ್ಯದಲ್ಲಿ 0.68 ಇತ್ತು, ಎರಡನೇ ವಾರದ ವೇಳೆ RT ನಂಬರ್ 0.72 ಗೆ ಹೆಚ್ಚಳವಾಗಿತ್ತು. ಇದೀಗ ಜುಲೈ ಮೂರನೇ ವಾರದ ವೇಳೆ 0.88 ಗೆ ಏರಿಯಾಗಿದ್ದು, ಆಗಸ್ಟ್ ತಿಂಗಳ ಆರಂಭದಲ್ಲೇ 1.11ಗೆ ಏರಿಕೆ ಆಗಿದೆ.
ಜನರ ಓಡಾಟ ಚಟುವಟಿಕೆ ಹೆಚ್ಚಳವಾಗಿರುವ ಬೆನ್ನಲ್ಲೇ ಹರಡುವಿಕೆ ಪ್ರಮಾಣ ಹೆಚ್ಚುತ್ತಿದೆ. ರಾಜ್ಯದ ಅಕ್ಕಪಕ್ಕದ ಮೂರು ರಾಜ್ಯದಲ್ಲಿ ಹರಡುವಿಕೆ ಪ್ರಮಾಣ ಹೆಚ್ಚಳವಾಗಿರೋದು ರಾಜ್ಯಕ್ಕೂ ಆತಂಕ ಮೂಡಿಸಿದೆ. ಎರಡನೇ ಅಲೆ ಸೋಂಕು ಪೂರ್ಣ ಇಳಿಕೆ ಆಗುವ ಜೊತೆಯಲ್ಲೇ ಮೂರನೇ ಅಲೆ ಮುನ್ಸೂಚನೆ ಶುರುವಾಗಿದೆ.
ಈ ಕುರಿತು ಮಾತನಾಡಿರುವ ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಆರ್‌ಟಿ ನಂಬರ್ ಹೆಚ್ಚಾಗುತ್ತಿದೆ. ನೆರೆಯ ಕೇರಳ-ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ದಕ್ಷಿಣಕನ್ನಡ, ಕೊಡಗು, ಉಡುಪಿ, ಚಾಮರಾಜನಗರದಲ್ಲಿ ಸೋಂಕು ಹೆಚ್ಚಾಗುತ್ತಿದ್ದು, ಕ್ರಮೇಣ ಆರ್‌ಟಿ ನಂಬರ್ ಏರಿಕೆ ಆಗ್ತಿದೆ.
ಹೀಗಾಗಿ, ಈ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾವಹಿಸಲಾಗಿದ್ದು, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ್ರು. ಕಾಂಟ್ಯಾಕ್ಟ್ ಟ್ರೇಸಿಂಗ್ ಹೆಚ್ಚು ಮಾಡಲಾಗುತ್ತಿದ್ದು, ಆ ಭಾಗದಲ್ಲಿ ಲಸಿಕೆ ಅಭಿಯಾನಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.