ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಇಂದು ಕೊನೆಯ ದಿನವಾಗಿದ್ದು, 22 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಒಬ್ಬರು ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಕೆ ಮಾಡಬಹುದಾಗಿದ್ದು, ಒಟ್ಟು 27 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಆಯುಕ್ತರು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.
![rr nagar](https://etvbharatimages.akamaized.net/etvbharat/prod-images/kn-bng-05-commissioner-visit-7202707_16102020195638_1610f_1602858398_229.jpg)
ಆರ್ ಆರ್ ನಗರದ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಮತ ಎಣಿಕೆ ಕೇಂದ್ರ ತೆರೆಯಲಾಗುತ್ತಿದೆ, ಈ ಸಂಬಂಧ ಇಂದು ಸಿದ್ದತೆಗಳನ್ನು ನೋಡಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಾದ ಕಮಲ್ ಪಂಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತ ಎಣಿಕೆ ಕೇಂದ್ರಕ್ಕೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಆಯುಕ್ತರು, ಕೇಂದ್ರ ಚುನಾವಣಾ ಆಯೋಗದಿಂದ ಅಬ್ಸರ್ವರ್ ಈಗಾಗಲೇ ಬಂದಿದ್ದಾರೆ. ನಾಳೆ ನಾಮಪತ್ರಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಅಕ್ಟೋಬರ್ 19 ರಂದು ನಾಮಪತ್ರಗಳನ್ನು ಹಿಂಪಡೆಯಬಹುದು. ಮತದಾರರ ಪಟ್ಟಿ ಪರಿಷ್ಕರಿಸಿದ್ದು, 1,616 ಮತಗಳನ್ನು ಸೇರ್ಪಡೆ ಮಾಡಲಾಗಿದ್ದು, 4,62,027 ಮತದಾರರು ಇದ್ದಾರೆ. ನವೆಂಬರ್ 3 ರಂದು ಮತದಾನ ನಡೆಯಲಿದ್ದು, ನವೆಂಬರ್ 10 ರಂದು ಮತ ಎಣಿಕೆ ನಡೆಯಲಿದೆ ಎಂದರು.
678 ಮತಗಟ್ಟೆಗಳಿದ್ದು, ಎಲ್ಲ ಮತಗಟ್ಟೆಗಳ ಎಣಿಕೆ ಕಾರ್ಯವನ್ನು ಚುನಾವಣಾ ಆಯೋಗ ನಿರ್ಧಾರ ಮಾಡಿದ ಸಮಯಕ್ಕೆ ಪ್ರಾರಂಭಿಸಲಾಗುವುದು. 4 ಮತ ಎಣಿಕೆ ಕೇಂದ್ರಗಳನ್ನು ಮಾಡಲಾಗಿದೆ. ಈ ಹಿಂದೆ ಮತ ಎಣಿಕೆ ಕೊಠಡಿಯಲ್ಲಿ 14 ಟೇಬಲ್ ಗಳಿಟ್ಟು ಮತ ಎಣಿಕೆ ಮಾಡಲಾಗುತ್ತಿತ್ತು. ಈ ಬಾರಿ ಕೋವಿಡ್ ಇರುವ ಹಿನ್ನೆಲೆ 1 ಕೊಠಡಿಯಲ್ಲಿ 7 ಟೇಬಲ್ ಗಳಂತೆ 4 ಕೊಠಡಿಗಳಲ್ಲಿ ಒಟ್ಟು 28 ಟೇಬಲ್ ಗಳನ್ನಿಟ್ಟು ಮತ ಎಣಿಕೆ ಮಾಡಲಾಗುತ್ತದೆ. ದೊಡ್ಡ ಸ್ಟ್ರಾಂಗ್ ರೂಂ ಕೂಡ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಪ್ರಕ್ರಿಯೆ 24 ಸುತ್ತುಗಳು ಬೇಕಾಗಲಿದೆ ಎಂದು ಹೇಳಿದರು.