ಬೆಂಗಳೂರು: ರಾಜ ರಾಜೇಶ್ವರಿನಗರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡದೇ ಜೆಡಿಎಸ್ ಕಾದು ನೋಡುವ ತಂತ್ರ ಅನುಸರಿಸಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಮೂಲಗಳ ಪ್ರಕಾರ, ಆರ್ ಆರ್. ನಗರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬಳಿಕ ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಘೋಷಿಸಲು ಉದ್ದೇಶಿಸಿದೆ.
ರಾಜರಾಜೇಶ್ವರಿನಗರ ಹಾಗೂ ಶಿರಾ ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 16ರಂದು ಕೊನೆ ದಿನವಾಗಿದೆ. ಹಾಗಾಗಿ, ಜೆಡಿಎಸ್ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ.
ಶಿರಾ ಕ್ಷೇತ್ರದ ಉಪಚುನಾವಣೆಗೆ ಅ.14 ರಂದು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಈಗಾಗಲೇ ಶಿರಾ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಸಚಿವ ದಿ. ಬಿ. ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರ ಹೆಸರನ್ನು ಪ್ರಕಟಿಸಲಾಗಿದೆ. ಆದರೆ, ರಾಜರಾಜೇಶ್ವರಿ ನಗರ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ.
ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಪ್ರಕಟವಾದ ನಂತರ ಜೆಡಿಎಸ್ ಅಭ್ಯರ್ಥಿ ಆಯ್ಕೆ ಅಂತಿಮ ಆಗಲಿದೆ ಎನ್ನಲಾಗುತ್ತಿದೆ. ಈ ಕ್ಷೇತ್ರಕ್ಕೆ ಮೂವರು ಆಕಾಂಕ್ಷಿಗಳನ್ನು ಅಂತಿಮ ಮಾಡಿದ್ದರೂ ಅಭ್ಯರ್ಥಿ ಆಯ್ಕೆ ಮಾತ್ರ ವಿಳಂಬ ಮಾಡಲಾಗುತ್ತಿದೆ.
ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್. ಪ್ರಕಾಶ್, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬೆಟ್ಟಸ್ವಾಮಿ ಗೌಡ ಹಾಗೂ ಜ್ಞಾನ ಭಾರತಿ ವಾರ್ಡ್ ನ ಅಧ್ಯಕ್ಷ ಕೃಷ್ಣ ಮೂರ್ತಿ ಅವರ ಹೆಸರುಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದ್ದು, ಈ ಮೂವರಲ್ಲಿ ಒಬ್ಬರಿಗೆ ಪಕ್ಷದ ಟಿಕೆಟ್ ನೀಡುವುದಾಗಿಯೂ ಜೆಡಿಎಸ್ ವರಿಷ್ಠರು ಹೇಳಿದ್ದಾರೆ.
ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿರುವ ಮಾಜಿ ಶಾಸಕ ಮುನಿರತ್ನ ನಾಯ್ಡು ಹಾಗೂ ತುಳಸಿ ಮುನಿರಾಜುಗೌಡ ಅವರಲ್ಲಿ ಒಬ್ಬರಿಗೆ ಟಿಕೆಟ್ ಖಚಿತ. ಆದರೆ, ಬಿಜೆಪಿ ವರಿಷ್ಠರು ಇಬ್ಬರಲ್ಲಿ ಯಾರನ್ನು ಅಂತಿಮಗೊಳಿಸಿದ್ದಾರೆ ಎಂಬುದು ನಿಗೂಢವಾಗಿದೆ.
ಒಂದು ವೇಳೆ, ಬಿಜೆಪಿ ಟಿಕೆಟ್ ವಂಚಿತರಾದ ನಂತರ ಯಾರಾದರೊಬ್ಬರು ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಇಚ್ಚೆಪಟ್ಟರೆ ಜೆಡಿಎಸ್ನಿಂದ ಅವಕಾಶ ಮಾಡಿಕೊಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಮೂರು ಪಕ್ಷಗಳಿಗೆ ಎರಡೂ ಉಪಚುನಾವಣೆಗಳು ಪ್ರತಿಷ್ಠೆಯ ಕಣವಾಗಿದೆ.