ಬೆಂಗಳೂರು: ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ವಿ.ವಿ ಪುರಂ ಪೊಲೀಸ್ ಠಾಣೆಯಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದಾನೆ. ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರವಿಕುಮಾರ್ ಸೈಕಲ್ ರವಿ ವಿ.ವಿ ಪುರಂ ಪೊಲೀಸ್ ಠಾಣೆಗೆ ಬರುವಂತೆ ಅಧಿಕೃತ ಸೂಚನೆಯಿಲ್ಲದಿದ್ದರೂ ಹಾಗೂ ನ್ಯಾಯಾಲಯದಿಂದ ವಾರಂಟ್ ಹೊರಡಿಸದಿದ್ದರೂ ವಕೀಲರೊಂದಿಗೆ ಹಾಜರಾಗಿದ್ದಾನೆ.
ಬನಶಂಕರಿ ಠಾಣೆ ರೌಡಿಪಟ್ಟಿಯಲ್ಲಿ ಸೈಕಲ್ ರವಿ ಹೆಸರು: ಕೊಲೆ, ಕೊಲೆ ಯತ್ನ, ಸುಲಿಗೆ, ಜೀವ ಬೆದರಿಕೆ ಸೇರಿದಂತೆ 25ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸೈಕಲ್ ರವಿ ಹೆಸರು ಬನಶಂಕರಿ ಠಾಣೆ ರೌಡಿಪಟ್ಟಿಯಲ್ಲಿದೆ. ತನ್ನದೇ ಗ್ಯಾಂಗ್ ಕಟ್ಟಿಕೊಂಡಿದ್ದ ಸೈಕಲ್ ರವಿ, ಪದೇ ಪದೆ ಅಪರಾಧ ಕೃತ್ಯ ಎಸಗುತ್ತಿದ್ದ. 2018ರಲ್ಲಿ ಫೈನಾನ್ಶಿಯರ್ ಅವಿನಾಶ್ ಹಾಗೂ ರೌಡಿ ಲಿಂಗ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸೈಕಲ್ ರವಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು. ಕೆಲದಿನ ಆಸ್ಪತ್ರೆ ಹಾಗೂ ಜೈಲಿನಲ್ಲಿದ್ದ. ಬಳಿಕ ಜಾಮೀನು ಪಡೆದು ಹೊರಬಂದಿದ್ದ.
ಇತ್ತೀಚೆಗೆ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಸೈಕಲ್ ರವಿ, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ಸಹೋದರ ದೀಪಕ್ ಹತ್ಯೆಗೆ ಸಂಚು ರೂಪಿಸಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಏಳಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೇ ವಿಚಾರವಾಗಿ ದಕ್ಷಿಣ ವಿಭಾಗದ ಪೊಲೀಸರು ಸೈಕಲ್ ರವಿ ವಿಚಾರಣೆಗೆ ಹುಡುಕಾಡಿದ್ದರು. ಆದರೆ ಪೊಲೀಸರ ಕೈಗೆ ಸಿಗದೆ ರವಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಮಧ್ಯರಾತ್ರಿ ಅಂಗಡಿಗೆ ನುಗ್ಗಿ ಸಿಗರೇಟ್ ಕದ್ದೊಯ್ದ ಖದೀಮ
ಸೈಕಲ್ ರವಿ ಹೇಳಿಕೆ: ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸೈಕಲ್ ರವಿ, ನಾನು ಎಲ್ಲಿಯೂ ಓಡಿಹೋಗಿಲ್ಲ. ಪೊಲೀಸರು ನನಗೆ ಯಾಕೆ ಹುಡುಕಾಡುತ್ತಿದ್ದಾರೆ ಎಂಬ ಮಾಹಿತಿಯಿಲ್ಲ. ವಕೀಲರ ಸೂಚನೆಯಂತೆ ಪೊಲೀಸರ ಮುಂದೆ ಹಾಜರಾಗಿದ್ದೇನೆ ಎಂದಿದ್ದಾನೆ.