ಬೆಂಗಳೂರು: ನಗರದ ಕುಖ್ಯಾತ ಗೂಂಡಾ, ರೌಡಿ ಶೀಟರ್ ಅಬ್ದುಲ್ಲಾ ಎಂಬಾತನನ್ನ ಚಂದ್ರ ಲೇಔಟ್ ಪೊಲೀಸರು ಗೂಂಡಾ ಕಾಯ್ದೆ ಅಡಿ ಬಂಧಿಸಿದ್ದಾರೆ.
ಈತನ ವಿರುದ್ಧ 2017 ರಿಂದ 2021ರ ವರೆಗೆ ದರೋಡೆ, ದರೋಡೆಗೆ ಹೊಂಚು, ಸುಲಿಗೆ, ಕೊಲೆ ಯತ್ನ, ಹಲ್ಲೆ, ಪೊಲೀಸರ ಮೇಲೆ ಹಲ್ಲೆ, ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಪ್ರಾಣ ಬೆದರಿಕೆ ಉಂಟು ಮಾಡುವುದು, ಕಳವು ಇತ್ಯಾದಿ ಪ್ರಕರಣಗಳು ಸೇರಿದಂತೆ ಚಂದ್ರಾ ಲೇಔಟ್, ವಿಜಯನಗರ, ಅನ್ನಪೂರ್ಣೇಶ್ವರಿನಗರ ಹಾಗೂ ಬ್ಯಾಟರಾಯನಪುರ ಪೊಲೀಸ್ ಠಾಣೆಗಳಲ್ಲಿ ಒಟ್ಟು 11 ಪ್ರಕರಣಗಳು ದಾಖಲಾಗಿವೆ.
ಈತನನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ನಂತರ ಈತ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದೆಂದು, ಷರತ್ತುಬದ್ಧ ಜಾಮೀನು ಕೂಡ ನೀಡಲಾಗಿತ್ತು.
ಆದರೂ ಆರೋಪಿ ಅಬ್ದುಲ್ಲಾ ನ್ಯಾಯಾಲಯದ ಷರತ್ತಿಗೆ ವಿರೋಧವಾಗಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಗೂಂಡಾಗಿರಿ ಮುಂದುವರೆಸಿ ಸಾರ್ವಜನಿಕ ನೆಮ್ಮದಿಗೆ ಭಂಗವುಂಟು ಮಾಡುತ್ತಿದ್ದ.. ಹೀಗಾಗಿ ಚಂದ್ರಾಲೇಔಟ್ ಪೊಲೀಸರು ಗೂಂಡಾ ಕಾಯ್ದೆ ಅಡಿ ಈತನನ್ನ ಬಂಧಿಸಿ, ಜೈಲಿಗಟ್ಟಿದ್ದಾರೆ.