ಬೆಂಗಳೂರು : ಚಂದ್ರಯಾನ-3ರ ಲ್ಯಾಂಡರ್ ವಿಕ್ರಂ ಸುರಕ್ಷಿತವಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿದು ಇತಿಹಾಸ ಸೃಷ್ಟಿಸಿದೆ. ಚಂದ್ರನ ಅಂಗಳದಲ್ಲಿ ಇಳಿದ ಮೇಲೆ ಸುಮಾರು 4 ಗಂಟೆ ಸ್ಥಬ್ದವಾಗಿ ಮುಂದಿನ ಕಾರ್ಯಾಚರಣೆಗೆ ಕಾಯುತ್ತಿತ್ತು. ಲ್ಯಾಂಡಿಂಗ್ ವೇಳೆ ಎದ್ದ ದೂಳು ಇಳಿಯುವವರೆಗೆ ಕಾಯಲಾಗಿತ್ತು. ನಿನ್ನೆ 10 ಗಂಟೆಯ ಸಮಯದಲ್ಲಿ ಲ್ಯಾಂಡರ್ ಪ್ರವೇಶ ದ್ವಾರದ ಸ್ಲೋಪ್ನ ಮೂಲಕ ನಿಧಾನವಾಗಿ ಸಣ್ಣ ಸ್ವಯಂ ಚಾಲಿತ ವಾಹನ ಪ್ರಗ್ಯಾನ್ ರೋವರ್ ಹೊರಬಂದಿದೆ. ಕಟ್ಟುಗಳನ್ನು ಬಿಚ್ಚಿ ಹೊರಬರಲು ಮತ್ತೆ 1 ಗಂಟೆ ಸಮಯ ತೆಗೆದುಕೊಂಡಿದೆ. ಸದ್ಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನೆಹರು ತಾರಾಲಯದ ಹಿರಿಯ ವಿಜ್ಞಾನಿ ಆನಂದ್ ತಿಳಿಸಿದರು.
ಬುಧವಾರ ರಾತ್ರಿ 10 ಗಂಟೆಗೆ ಆರಂಭವಾದ ಕಾರ್ಯಾಚರಣೆ ಸುಮಾರು 11:15ಕ್ಕೆ ಮುಗಿದಿದೆ. ಸದ್ಯ ರೋವರ್ ಲ್ಯಾಂಡರ್ ಜಂಟಿಯಾಗಿ ಚಂದ್ರನ ಮೇಲ್ಮೈನ ಅನ್ವೇಷಣೆಯಲ್ಲಿ ತೊಡಗಿವೆ. ಮುಂದಿನ 14 ದಿನ ರೋವರ್ನಲ್ಲಿರುವ 2 ವೈಜ್ಞಾನಿಕ ಉಪಕರಣ ಮತ್ತು ಲ್ಯಾಂಡರ್ನ 4 ಉಪಕರಣ ಅನ್ವೇಷಣೆಯನ್ನು ಮಾಡಲಿವೆ. ಈ ಪ್ರದೇಶದಲ್ಲಿ 14 ದಿನಗಳ ಕಾಲ ಸೂರ್ಯನ ಕಿರಣಗಳು ಬೀಳುತ್ತದೆ. ಸೋಲಾರ್ ಪ್ಯಾನೆಲ್ಗಳು ಸೂರ್ಯನ ಕಿರಣಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಯಾಗಿ ಉಪಕರಣಗಳು ಕಾರ್ಯನಿರ್ವಹಿಸುತ್ತದೆ ಎಂದರು.
ವೈಜ್ಞಾನಿಕ ಸಂಶೋಧನೆಗಳು: ರೋವರ್ನ 2 ಉಪಕರಣಗಳು ಚಂದ್ರನ ನೆಲದ ಮೇಲಿನ ಖನಿಜ ಸಂಪತ್ತು ಮತ್ತು ಕಂಪನಗಳ ವೈಜ್ಞಾನಿಕ ಸಂಶೋಧನೆಯನ್ನು ನಡೆಸಿ ಹೆಚ್ಚಿನ ಮಾಹಿತಿ ರವಾನಿಸಲಿದೆ. ಲ್ಯಾಂಡರ್ನ 4 ಉಪಕರಣಗಳು ಮಣ್ಣಿನ ಉಷ್ಣತೆ, ಮೇಲ್ಪದರದ ರಚನೆ, ಶೇಕಡಾ ವ್ಯತ್ಯಾಸ ಮತ್ತು ದೂರವನ್ನು ಅಳೆಯಲಿದೆ.
ಮಾಹಿತಿ ರವಾನೆ ಹೇಗೆ?: ರೋವರ್ ಮೊದಲು ಮಾಹಿತಿಯನ್ನು ನೌಕೆಗೆ ರವಾನಿಸುತ್ತದೆ. ಅಲ್ಲಿಂದ ಇಸ್ರೋ ಕೇಂದ್ರಗಳಿಗೆ ರವಾನೆಯಾಗಲಿದೆ. ನಗರದ ಬ್ಯಾಲಾಳಿನ ಡೇಟಾ ಕೇಂದ್ರದ ದೊಡ್ಡ ಡಿಶ್ ಮೂಲಕ ಸಂಗ್ರಹಿಸಲಾಗುತ್ತಿದೆ. ಇಲ್ಲಿನಿಂದ ಸಂದೇಶಗಳನ್ನು ಕೂಡ ಲ್ಯಾಂಡರ್ ಮುಖಾಂತರ ರೋವರ್ಗೆ ತಲುಪಲಿದೆ. ಇನ್ನೊಂದು ವಿಧಾನವಾಗಿ ಚಂದ್ರಯಾನ- 2 ನೌಕೆಯ ಮೂಲಕವೂ ಸಂವಹನಗಳು ನಡೆಯುತ್ತಿದೆ.
14 ದಿನಗಳ ನಂತರ ಏನಾಗುತ್ತದೆ?: ರೋವರ್ ಗಂಟೆಗೆ ಕೆಲವು ಮೀಟರ್ಗಳು ಮಾತ್ರ ಚಲಿಸುತ್ತದೆ. ಇಡೀ 14 ದಿನ ಚಂದ್ರನ ಮೇಲೆ ಕೆಲವು 100 ಮೀಟರ್ ಚಲಿಸಲಿದೆ. 14 ದಿನಗಳ ನಂತರ ಇಡೀ ಪ್ರದೇಶದಲ್ಲಿ ಕತ್ತಲು ಆವರಿಸಲಿದೆ. ಆದರಿಂದ ವಿದ್ಯುತ್ ಉತ್ಪಾದನೆ ಸ್ಥಗಿತವಾಗಲಿದೆ. ಆಗ ರೋವರ್ ಮತ್ತು ಲ್ಯಾಂಡರ್ ಯಾವುದೇ ರೀತಿಯ ಕಾರ್ಯಾಚರಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತೆ ಹಗಲು ಪ್ರಾರಂಭವಾದಾಗ ಕಾರ್ಯಾಚರಣೆ ಮುಂದುವರೆಯುವ ಸಾಧ್ಯತೆಯಿದೆ. ಎಲ್ಲಿಯವರೆಗೆ ಉಪಕರಣಗಳು ಕಾರ್ಯನಿರ್ವಹಿಸುತ್ತವೆಯೋ ಅಲ್ಲಿಯವರೆಗೂ ನಮಗೆ ಮಾಹಿತಿ ರವಾನೆಯಾಗಲಿದೆ.
ಈ ಮಿಷನ್ನಿಂದ ಪ್ರೇರಣೆಗೊಂಡು, ತಾಂತ್ರಿಕ ನೌಪುಣ್ಯತೆಯಿಂದ ಇನ್ನಷ್ಟು ಉನ್ನತೀಕರಿಸಿದ ಉಪಕರಣಗಳನ್ನು ಚಂದ್ರನ ಮೇಲ್ಮೈಗೆ ಕಳುಹಿಸಲು ಸಾಧ್ಯವಾಗಲಿದೆ. ಮುಂದಿನ ಗಗನಯಾನ ಮಿಷನ್ಗೆ ಮುನ್ನುಡಿ ಬರೆದಿದೆ ಎಂದು ಎಂದು ವಿಜ್ಞಾನಿ ವಿವರಿಸಿದರು.
ಇದನ್ನೂ ಓದಿ : ಸಣ್ಣದೊಂದು ದೋಷದಿಂದ ಇಸ್ರೋ ನಾಲ್ಕು ವರ್ಷ ಕಾಯಬೇಕಾಯಿತು: ಚಂದ್ರಯಾನ-3 ಚರಿತ್ರೆ ಸೃಷ್ಟಿಗೆ ಮಾಜಿ ಮುಖ್ಯಸ್ಥ ಕೆ ಶಿವನ್ ಹರ್ಷ