ಬೆಂಗಳೂರು: ಯಶವಂತಪುರ ಕ್ಷೇತ್ರದ ಚುನಾವಣಾ ಅಖಾಡ ಕಾವು ಪಡೆದುಕೊಂಡಿದ್ದು, ನಿನ್ನೆ ಬೆಳಗ್ಗೆಯಿಂದಲೇ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹಾಗೂ ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ಬಿರುಸಿನ ಪ್ರಚಾರ ನಡೆಸಿದರು.
ಸೋಮವಾರದಂದು ನಾಮಪತ್ರ ಸಲ್ಲಿಕೆ ಭರಾಟೆಯಲ್ಲಿದ್ದ ಯಶವಂತಪುರ ಅಭ್ಯರ್ಥಿಗಳು ನಿನ್ನೆ ಕ್ಷೇತ್ರ ಪರ್ಯಟನೆ ನಡೆಸಿ ಮತಯಾಚನೆಗಿಳಿದರು. ಮೊದಲಿಗೆ ಅಭ್ಯರ್ಥಿಗಳು ಸ್ಥಳೀಯ ಮುಖಂಡರ ಮನೆಗಳಿಗೆ ಭೇಟಿ ನೀಡಿ, ಸಭೆ ನಡೆಸಿ, ಬೆಂಬಲಿಸುವಂತೆ ಮನವಿ ಮಾಡಿದರು. ಯಶವಂತಪುರ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳಾದ ಎಸ್.ಟಿ.ಸೋಮಶೇಖರ್, ಜವರಾಯಿಗೌಡ, ಪಾಳ್ಯ ನಾಗರಾಜ್ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.
ಸ್ಥಳೀಯ ಮುಖಂಡರ ಮನೆಗಳಿಗೆ ಭೇಟಿ ನೀಡುವುದರ ಜೊತೆಗೆ ಕಾಂಗ್ರೆಸ್ನ ಸ್ಥಳೀಯ ಕೈ ಮುಖಂಡರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿದರು. ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮುಖಂಡರನ್ನು ಮನವೊಲಿಸಿದರು. ಜತೆಗೆ ಬಿಜೆಪಿ ಮುಖಂಡರನ್ನು ಭೇಟಿಯಾಗಿ ಅವರ ವಿಶ್ವಾಸ ಗಳಿಸುವ ಕೆಲಸವನ್ನೂ ಸಹ ಮುಂದುವರಿಸಿದರು. ಎಸ್.ಟಿ.ಸೋಮಶೇಖರ್ ಇಂದು ಸ್ಥಳೀಯ ಕೈ ನಾಯಕರಾದ ಸಿ.ಡಿ.ರಾಮಣ್ಣ, ಮಾರೇ ಗೌಡ್ರು, ಅಶ್ವತ್ಥ್, ರುದ್ರೇಶ್ ಮತ್ತು ಭಾಸ್ಕರ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸುವುದರ ಮೂಲಕ ಉಪಸಮರದ ಗೆಲುವಿಗೆ ರಣತಂತ್ರ ರೂಪಿಸಿದರು.
ಇತ್ತ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡರೂ ಸಹ ತಾವರೆಕೆರೆ, ಹೇರೋಹಳ್ಳಿ ವಾರ್ಡ್ ಮುಂತಾದೆಡೆ ತೆರಳಿ ಮತಯಾಚನೆ ಮಾಡಿದರು. ಸ್ಥಳೀಯ ಜೆಡಿಎಸ್ ನಾಯಕರನ್ನು ಭೇಟಿಯಾಗಿ ಈ ಬಾರಿ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ಮನವಿ ಮಾಡಿದರು. ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದು, ಈ ಬಾರಿ ಎಸ್.ಟಿ.ಸೋಮಶೇಖರ್ರ ಅನರ್ಹತೆ, ಆಪರೇಷನ್ ಕಮಲ, ಕುಮಾರಣ್ಣ ಸರ್ಕಾರ ಪತನ ಈ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿ ಹೆಚ್ಚಿನ ಮತಗಳಿಕೆಗೆ ಯತ್ನಿಸುವಂತೆ ಸ್ಥಳೀಯ ನಾಯಕರಲ್ಲಿ ಮನವಿ ಮಾಡಿದರು. ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಪಾಳ್ಯ ನಾಗರಾಜ್ ಕೂಡ ಕ್ಷೇತ್ರದಾದ್ಯಂತ ಸುತ್ತಾಡಿ ಮತಯಾಚನೆ ನಡೆಸಿದ್ದಾರೆ.