ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯ ಶರವಣ ಅವರಿಗೆ ಶಿವಾಜಿನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಕ್ಕ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ರೋಷನ್ ಬೇಗ್ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.
ಇಂದು ಬಿಜೆಪಿ ಪಕ್ಷ ಶಿವಾಜಿನಗರ ಸೇರಿದಂತೆ 14 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದು, ಅನರ್ಹ ಶಾಸಕರೆಲ್ಲರಿಗೂ ಟಿಕೆಟ್ ಸಿಕ್ಕಿದೆ. ರಾಣೆಬೆನ್ನೂರಿನಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಆರ್.ಶಂಕರ್ ಅವರ ಹೆಸರನ್ನು ಬಾಕಿ ಉಳಿಸಿರುವ ಬಿಜೆಪಿ ಉಳಿದೆಲ್ಲ ಕ್ಷೇತ್ರಗಳ ಅನರ್ಹರಿಗೆ ಟಿಕೆಟ್ ನೀಡಿದೆ. ಶಿವಾಜಿನಗರದ ಅನರ್ಹ ಶಾಸಕರ ಬದಲು ಬಿಬಿಎಂಪಿ ಸದಸ್ಯ ಶರವಣಗೆ ಟಿಕೆಟ್ ನೀಡಲಾಗಿದೆ.
ಐಎಂಎ ಪ್ರಕರಣದಲ್ಲಿ ಹೆಸರು ಸಿಲುಕಿರುವುದು ಹಾಗೂ ಮುಸ್ಲಿಂ ಅಭ್ಯರ್ಥಿಯಾಗಿರುವ ಹಿನ್ನೆಲೆ ಬಿಜೆಪಿಯಿಂದ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಇದೆ. ಈ ಹಿನ್ನೆಲೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್. ಡಿ. ಕುಮಾರಸ್ವಾಮಿ ಅವರನ್ನು ರೋಷನ್ ಬೇಗ್ ಸಂಪರ್ಕಿಸಿದ್ದರು. ಆದರೆ ಈ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಘೋಷಣೆಯಾದ ಹಿನ್ನೆಲೆ ದೇವೇಗೌಡರು ಸೂಕ್ತವಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ. ಕಾಂಗ್ರೆಸ್ಗೆ ಮರಳಲು ಸಾಧ್ಯವಿಲ್ಲದ ಹಿನ್ನೆಲೆ ಅಂತಿಮವಾಗಿ ಪಕ್ಷೇತರರಾಗಿ ಕಣಕ್ಕಿಳಿಯಲು ರೋಷನ್ ಬೇಗ್ ನಿರ್ಧರಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಸೋಮವಾರ ನಾಮಪತ್ರ ಸಲ್ಲಿಕೆ?:
ಸೋಮವಾರ ನಾಮಪತ್ರ ಸಲ್ಲಿಕೆ ಮಾಡಲು ರೋಷನ್ ಬೇಗ್ ನಿರ್ಧಾರ ಮಾಡಿದ್ದು, ಇಂದು ಈ ಸಂಬಂಧ ಶಿವಾಜಿನಗರದಲ್ಲಿ ಕಾರ್ಯಕರ್ತರ ಜೊತೆಗೆ ಮಾತುಕತೆ ನಡೆಸಿದ್ದಾರೆ. ತಮ್ಮ ಸ್ಪರ್ಧೆಗೆ ಶಿವಾಜಿನಗರವನ್ನು ಆಯ್ಕೆ ಮಾಡಿಕೊಂಡಿರುವ ಅವರು, ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಜೊತೆ ಪಕ್ಷೇತರರಾಗಿ ಯಾವ ರೀತಿ ಏಕಾಂಗಿ ಹೋರಾಟ ನಡೆಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಜೊತೆಗೆ ಐಎಂಎ ಪ್ರಕರಣದಲ್ಲಿ ಹಣ ಕಳೆದುಕೊಂಡವರು, ರೋಷನ್ ಬೇಗ್ ಅವರನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದು, ಈ ಪ್ರಕರಣದಲ್ಲಿ ಇವರು ಇಕ್ಕಟ್ಟಿಗೆ ಸಿಲುಕಿದ್ದಾರೆ.