ಬೆಂಗಳೂರು: ದೇಶದ ಆರ್ಥಿಕ ಪ್ರಗತಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ವದ್ದಾಗಿದೆ. ದೇಶದ ಆರ್ಥಿಕತೆಯಲ್ಲಿ ಕ್ರಾಂತಿಯಾಗುತ್ತಿದೆ ಎಂದರೆ ಅದು ಸಣ್ಣ ಕೈಗಾರಿಕೆಗಳ ಕೊಡುಗೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಆಯೋಜಿಸಲಾಗಿರುವ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಶೋ 2023 ಉದ್ಘಾಟಿಸಿ ಅವರು ಮಾತನಾಡಿದರು. ಖಾಸಗಿ ಮಾಲೀಕತ್ವದ ಸಣ್ಣ ಕೈಗಾರಿಕೆಗಳು ಉನ್ನತಿ ಹೊಂದುತ್ತಿರುವುದು ದೇಶದ ವಾಣಿಜ್ಯ ಪ್ರಗತಿಯಾಗಿದೆ ಎಂದು ಸಿಂಗ್ ಅಭಿಪ್ರಾಯಪಟ್ಟರು.
ಉದಯೋನ್ಮುಖ ಕೈಗಾರಿಕೋದ್ಯಮಿಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಕೈಗಾರಿಕೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಲಘು ಉದ್ಯೋಗ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಮೈಸೂರು ಮಹಾರಾಜರ ದೂರದೃಷ್ಟಿಯಿಂದ ಬೆಂಗಳೂರಿನಲ್ಲಿ ಎಚ್‌ಎಎಲ್ ಆರಂಭವಾಯಿತು. ನಷ್ಟದಲ್ಲಿದ್ದ ಎಚ್‌ಎಎಲ್ ಕಾರ್ಖಾನೆ, ಪ್ರಧಾನಿ ಮೋದಿ ಅವರ ಕನಸಿನ ಮೇಕ್ ಇನ್ ಇಂಡಿಯಾ ಯೋಜನೆ ಆರಂಭಗೊಂಡ ನಂತರ ನಷ್ಟದಿಂದ ಮೇಲೆದ್ದು ಆರೋಗ್ಯಕರ ಸ್ಥಿತಿಯಲ್ಲಿ ಮುಂದುವರೆದಿದೆ ಎಂದು ನುಡಿದರು.
ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ, ವಿದೇಶಾಂಗ ರಾಜ್ಯ ಸಚಿವ ವಿ.ಮುರಳೀಧರನ್, ಭಾರತೀಯ ವಾಯುಪಡೆ, ನೌಕಾಪಡೆ ಮತ್ತು ಭೂಸೇನೆಯ ಮುಖ್ಯಸ್ಥರು, ಐಎಂಎಸ್- 2023 ಸಲಹಾ ಸಮಿತಿ ಅಧ್ಯಕ್ಷ ಬಾಬಾ ಕಲ್ಯಾಣಿ, ಎಲ್ ಆ್ಯಂಡ್ ಟಿ ಡಿಫೆನ್ಸ್ ಮುಖ್ಯಸ್ಥ ಅರುಣ್ ಟಿ.ರಾಮಚಂದಾನಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: 'ಬರ'ದ ಬರೆ ಮಧ್ಯೆ ರಾಜ್ಯಕ್ಕೆ ಮತ್ತೊಂದು ಕಂಟಕ: ಕೇಂದ್ರ ಸಹಾಯಾನುದಾನ ಬಿಡುಗಡೆಯಲ್ಲಿ ಭಾರಿ ಕುಸಿತ!