ಬೆಂಗಳೂರು : ಐಪಿಎಸ್ ಅಧಿಕಾರಿ ಡಿ. ರೂಪಾ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಯಾವುದೇ ರೀತಿಯ ಮಾನ ಹಾನಿಕಾರಕ ಹೇಳಿಕೆ ನೀಡುವುದು ಮತ್ತು ಮಾಧ್ಯಮಗಳಲ್ಲಿ ಅದನ್ನು ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ಜಾರಿ ಮಾಡುವಂತೆ ಕೋರಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಸಿಟಿ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಈ ಸಂಬಂಧ ಸಲ್ಲಿಕೆಯಾಗಿರುವ ದಾವೆ ವಿಚಾರಣೆ ನಡೆಸಿದ ನಗರದ 23ನೇ ಸಿಟಿ ಸಿವಿಲ್ ನ್ಯಾಯಾಲಯ, ವಿಚಾರಣೆ ಪೂರ್ಣಗೊಳಿಸಿ ಆದೇಶವನ್ನು ಕಾಯ್ದಿರಿಸಿದೆ. ವಿಚಾರಣೆ ವೇಳೆ ಅರ್ಜಿದಾರರಾದ ರೋಹಿಣಿ ಸಿಂಧೂರಿ ಪರ ವಾದ ಮಂಡಿಸಿದ ವಕೀಲರು, ಸೈಬರ್ ವಿಭಾಗದ ಮುಖ್ಯಸ್ಥರಾಗಿದ್ದ ಐಪಿಎಸ್ ಅಧಿಕಾರಿ ರೂಪಾ ಅವರು ರೋಹಿಣಿ ಅವರ ಮೊಬೈಲ್ನಲ್ಲಿನ ಮಾಹಿತಿಯನ್ನು ಕಾನೂನು ಬಾಹಿರವಾಗಿ ಪಡೆದುಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಈ ಸಂಬಂಧ ಸೂಕ್ತ ಪ್ರಾಧಿಕಾರದಲ್ಲಿ ದೂರು ನೀಡಬಹುದಲ್ಲವೇ ಎಂದು ಪ್ರಶ್ನಿಸಿದರು. ಆಗ ವಕೀಲರು ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಲಾಗಿದೆ ಎಂದು ವಿವರಿಸಿದ್ದಾರೆ. ವಾದ ಮುಂದುವರೆಸಿದ ವಕೀಲರು, ರೋಹಿಣಿ ಅವರ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ರೂಪಾ ಪ್ರಕಟಿಸಿದ್ದಾರೆ. ರೋಹಿಣಿ ಅವರ ಖಾಸಗಿ ಮೊಬೈಲ್ ನಂಬರ್ ಬಹಿರಂಗಪಡಿಸಿದ್ದಾರೆ. ಇದರಿಂದ ನೂರಾರು ಅಪರಿಚಿತರು ಕರೆ ಮಾಡುತ್ತಿದ್ದಾರೆ. ರೂಪಾ ವೈಯಕ್ತಿಕ ತೇಜೋವಧೆಗೆ ಇಳಿದಿದ್ದು, ಕಾನೂನು ಚೌಕಟ್ಟು ಮೀರಿ ಹೇಳಿಕೆ ನೀಡುತ್ತಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ವಾದ ಆಲಿಸಿ ನ್ಯಾಯಾಧೀಶರು ಈ ಸಂಬಂಧ ಆದೇಶವನ್ನು ಫೆಬ್ರವರಿ 23ಕ್ಕೆ ಕಾಯ್ದಿರಿಸಿದೆ.
ಪ್ರಕರಣದ ಹಿನ್ನೆಲೆ ಏನು?: ರೋಹಿಣಿ ಸಿಂಧೂರಿ ತಮ್ಮ ಭಾವಚಿತ್ರಗಳನ್ನು ಇತರೆ ಐಎಎಸ್ ಅಧಿಕಾರಿಗಳಿಗೆ ಕಳುಹಿಸಿದ್ದಾರೆ ಎನ್ನಲಾದ ಚಿತ್ರಗಳನ್ನು ಫೇಸ್ಬುಕ್ನಲ್ಲಿ ಡಿ. ರೂಪಾ ಪ್ರಕಟಿಸಿದ್ದಾರೆ. ಅಲ್ಲದೆ, ಅವರ ವಿರುದ್ಧ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಆರೋಪ ಮಾಡಿದ್ದಾರೆ. ಈ ನಡುವೆ ರೋಹಿಣಿ ಮತ್ತು ರೂಪಾ ಅವರ ನಡುವೆ ಸಾರ್ವಜನಿಕ ಕಿತ್ತಾಟ ಆರಂಭವಾಗಿತ್ತು. ಇದು ಸರ್ಕಾರಕ್ಕೆ ಮುಜುಗರದ ಸನ್ನಿವೇಶ ನಿರ್ಮಿಸಿತ್ತು. ಇದರಿಂದ ಎಚ್ಚೆತ್ತ ಸರ್ಕಾರವು ಇಬ್ಬರು ಮಹಿಳಾಧಿಕಾರಿಗಳು ಹಾಗೂ ರೂಪಾ ಪತಿ ಮೌನೀಶ್ ಮೌದ್ಗಿಲ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ರೂಪಾಗೆ ಲೀಗಲ್ ನೋಟಿಸ್: ತಮ್ಮ ಮೇಲೆ ಮಾಡಿರುವ ಆರೋಪಗಳು ಆಧಾರಹಿತವಾಗಿದ್ದು ಕ್ಷಮೆ ಕೇಳದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ಮೂಲಕ ಐಪಿಎಸ್ ಅಧಿಕಾರಿ ಡಿ.ರೂಪಾ ಅವರಿಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಲೀಗಲ್ ನೋಟಿಸ್ ನೀಡಿದ್ದಾರೆ.
ರೂಪಾ ಅವರು ಮಾಡಿದ್ದ ಎಲ್ಲಾ ಆರೋಪಗಳು ಸೇರಿ ಒಟ್ಟು 21 ಅಂಶಗಳನ್ನು ಮುಂದಿಟ್ಟು ರೋಹಿಣಿ ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ತಲುಪಿದ 24 ಗಂಟೆಯೊಳಗಾಗಿ ಫೇಸ್ಬುಕ್ನಲ್ಲಿ ಬಹಿರಂಗವಾಗಿ ಕ್ಷಮಾಪಣೆ ನೀಡಬೇಕು. ಇಲ್ಲವಾದರೆ ಒಂದು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಭ್ರಷ್ಟಾಚಾರ ಆರೋಪ, ವೈಯಕ್ತಿಕ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವುದು ಸೇರಿದಂತೆ ಎಲ್ಲಾ ಅಂಶಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : 24 ವರ್ಷ ಕಳೆದರೂ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದ ಬಿಡಿಎ: ಮಾಲೀಕರಿಗೆ ಜಮೀನು ಹಿಂದಿರುಗಿಸಿದ ಹೈಕೋರ್ಟ್