ಬೆಂಗಳೂರು: ಐಎಎಸ್ ಹಾಗೂ ಐಪಿಎಸ್ ಮಹಿಳಾ ಅಧಿಕಾರಿಗಳ ನಡುವಿನ ಶೀತಲ ಸಮರ ಮತ್ತೊಂದು ರೂಪ ಪಡೆದುಕೊಳ್ಳುತ್ತಿದೆ. ರೋಹಿಣಿ ಸಿಂಧೂರಿ ವೈಯಕ್ತಿಕ ಫೋಟೋಗಳನ್ನು ವೈರಲ್ ಮಾಡಿರುವ ಡಿ.ರೂಪಾ ವಿರುದ್ಧ ಸಿಂಧೂರಿ ಪತಿ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರೂಪಾ ಮಾಡಿದ ಆರೋಪಕ್ಕೆ ನಿನ್ನೆ ತಿರುಗೇಟು ನೀಡಿದ್ದ ರೋಹಿಣಿ ಸಿಂಧೂರಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಇಂದು ಬೆಳಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಗೆ ಸಿಂಧೂರಿ ಪತಿ ಸುಧೀರ್ ರೆಡ್ಡಿ ತೆರಳಿ ರೂಪಾ ವಿರುದ್ಧ ದೂರು ನೀಡಿದ್ದಾರೆ. ಪತ್ನಿ ಸಿಂಧೂರಿ ಅವರ ವೈಯಕ್ತಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಮಹಿಳಾ ಘನತೆ ಹಾಗೂ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಅಲ್ಲದೇ, ಸರ್ಕಾರಿ ಅಧಿಕಾರಿಯನ್ನ ತೇಜೋವಧೆ ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಫೇಸ್ ಬುಕ್ ಹಾಗೂ ಟ್ವಿಟರ್ ಲಿಂಕ್ ಇರುವ ಎರಡು ಪುಟಗಳ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು, ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ದೂರು ನೀಡುವ ಮುನ್ನ ಮಾತನಾಡಿದ ಸುಧೀರ್ ರೆಡ್ಡಿ, 'ವೈಯಕ್ತಿಕ ಉದ್ದೇಶದಿಂದ ಆರೋಪಿಸುತ್ತಿರುವ ಡಿ.ರೂಪಾಗೆ ಮಾನಸಿಕ ತೊಂದರೆಯಿದೆ. ನಾನು ಎಲ್ಲಿಯೂ ಪತ್ನಿಯ ಅಧಿಕಾರ ದುರ್ಬಳಕೆ ಮಾಡಿಕೊಂಡವನಲ್ಲ. ಸುಖಾಸುಮ್ಮನೆ ನಮ್ಮ ವಿರುದ್ಧ ಮಾತನಾಡಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ. ನಾನು ಯಾವತ್ತೂ ಮಾಧ್ಯಮದ ಮುಂದೆ ಬಂದವನಲ್ಲ. ಆದರೆ, ಈ ವಿಚಾರ ತೀರಾ ವೈಯಕ್ತಿಕವಾಗಿರುವುದರಿಂದ ಮಾತನಾಡುತ್ತಿದ್ದೇನೆ. ತನಗಿಂತ 10 ವರ್ಷ ಜೂನಿಯರ್ ಆಗಿರುವ ಸಿಂಧೂ ಇಷ್ಟು ಹೆಸರು ಮಾಡಿದ್ದಾರೆ ಎಂದು ರೂಪಾಗೆ ಅಸೂಯೆ ಇದೆ. ಹೀಗಾಗಿ, ಅವರು ಸುಖಾ ಸುಮ್ಮನೆ ಆರೋಪ ಮಾಡ್ತಿದ್ದಾರೆ. ರೂಪಾ ಅವರ ಪರ್ಸನಲ್ ಅಜೆಂಡಾ ಏನಿದೆ ಅನ್ನೋದು ಗೊತ್ತಾಗಬೇಕು. ಅವರಿಗೆ ಪ್ರಚಾರ ಬೇಕಾಗಿದೆ. ಆದರೆ ಸಿಂಧೂ ಕೆಲಸವೇ ಹೇಳತ್ತದೆ, ಅವರಿಗೆ ಪ್ರಚಾರದ ಗೀಳು ಇಲ್ಲ ಎನ್ನುವ ಮೂಲಕ ಡಿ ರೂಪಾ ಅವರಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ: ಡಿ.ರೂಪಾ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ ರೋಹಿಣಿ ಸಿಂಧೂರಿ
ಸುಧೀರ್ ಪ್ರತಿಕ್ರಿಯೆ ನೀಡುತ್ತಿದ್ದಂತೆ ತಮ್ಮ ಫೇಸ್‌ಬುಕ್ ಮೂಲಕ ಕೌಂಟರ್ ನೀಡಿರುವ ಡಿ.ರೂಪಾ 'ಸಿಂಧೂರಿ ಅವರ ಪತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ ಅಂದ್ರೆ ಏನರ್ಥ?, ರೋಹಿಣಿ ಸಿಂಧೂರಿಗೆ ಮಾಧ್ಯಮದವರ ಸವಾಲು ಎದುರಿಸಲು ಧೈರ್ಯ ಇಲ್ಲವಾ?, ಉತ್ತರಗಳಿಲ್ಲವಾ?, ಅವರ ಪತಿ ಹೇಳೋದು ಫೋನ್ ಹ್ಯಾಕ್ ಮಾಡಲಾಗಿದೆ ಎಂದು. ಇದು ನಂಬುವ ಮಾತೆ?, ಏನು ಹೇಳಬೇಕು ಪಾಪ, ಮಾನ ಹರಾಜು ಆಗಿದೆ' ಎಂದಿದ್ದಾರೆ.