ಬೆಂಗಳೂರು: ಓಲಾ ಕಾರಿನಲ್ಲಿ ತೆರಳುತ್ತಿದ್ದ ಪ್ರಯಾಣಿಕರೊಬ್ಬರಿಗೆ ಚಾಲಕ ಸೇರಿ ಇನ್ನೋರ್ವ ದರೋಡೆಗೆ ಯತ್ನಿಸಿರುವ ಘಟನೆ ಬಾಗಲೂರು ಬಳಿ ತಡರಾತ್ರಿ ನಡೆದಿದೆ. ಕಾರಿನ ಡಿಕ್ಕಿಯಲ್ಲಿ ಅವಿತು ಕುಳಿತು ಕರ್ನಲ್ ಓರ್ವರಿಗೆ ಬೆದರಿಕೆ ಹಾಕಿ ದರೋಡೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಕರ್ನಲ್ ತಪ್ಪಿಸಿಕೊಂಡಿದ್ದಾರೆ.
ದೆಹಲಿಯಿಂದ ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ಗೆ ಬಂದಿಳಿದಿದ್ದ ಕರ್ನಲ್ ಓಲಾ ಬುಕ್ ಮಾಡಿದ್ದಾರೆ. ಸಿಟಿ ಕಡೆ ಪ್ರಯಾಣಿಸುವ ವೇಳೆ ಟೋಲ್ ರಸ್ತೆ ಬಿಟ್ಟು ಅಡ್ಡದಾರಿ ಹಿಡಿದಿದ್ದಾನೆ. ಬಳಿಕ ಡಿಕ್ಕಿಯಲ್ಲಿ ಏನೋ ಶಬ್ದ ಬರುತ್ತಿದೆ ಎಂದು ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಕರ್ನಲ್ಗೆ ಕಾರಿನಿಂದ ಇಳಿಯುವಂತೆ ಹೇಳಿದ್ದಾನೆ. ಕರ್ನಲ್ ಕೆಳಗಿಳಿಯುತ್ತಿದ್ದಂತೆ ಡಿಕ್ಕಿಯಲ್ಲಿದ್ದ ಇನ್ನೋರ್ವ ಚಾಕು ಹೊರತೆಗೆದು ಬೆದರಿಕೆ ಹಾಕಿದ್ದಾನೆ.
ಈ ವೇಳೆ ಕರ್ನಲ್ ದರೋಡೆಕೋರರನ್ನು ತಳ್ಳಿ ಅಲ್ಲಿಂದ ಪರಾರಿಯಾಗಿದ್ದು, ಅದೇ ಮಾರ್ಗವಾಗಿ ಬರುತ್ತಿದ್ದ ಹೊಯ್ಸಳ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಘಟನೆ ಸಂಬಂಧ ಬಾಗಲೂರು ಠಾಣೆ ಇನ್ಸ್ಪೆಕ್ಟರ್ ಪ್ರಶಾಂತ್ ನೇತೃತ್ವದ ತಂಡ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಇನ್ನೋರ್ವನಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಕಲಬುರಗಿಯಲ್ಲಿ ಮತ್ತೆ ಹರಿದ ನೆತ್ತರು: ಬೈಕ್ ಅಡ್ಡಗಟ್ಟಿ ಲ್ಯಾಬ್ ಟೆಕ್ನಿಷಿಯನ್ ಬರ್ಬರ ಹತ್ಯೆ