ಕನ್ನಡದ ರೇಡಿಯೋ ಕ್ಷೇತ್ರದಲ್ಲಿ ಪಟ ಪಟ ಅಂತಾ ಮಾತನಾಡುತ್ತಾ ಮಾತಿನ ಮಲ್ಲಿ ಅಂತಾ ಪ್ರಖ್ಯಾತಿ ಹೊಂದಿದ್ದ ರೇಡಿಯೋ ನಿರೂಪಕಿ ಆರ್ ಜೆ ರಚನಾ ವಿಧಿವಶರಾಗಿದ್ದಾರೆ.
ತೀವ್ರ ಹೃದಯಾಘಾತದಿಂದ ರಚನಾ ನಿಧನ ಹೊಂದಿದ್ದಾರೆ. 39 ವರ್ಷದ ಆರ್ ಜೆ ರಚನಾ ತಮ್ಮ ಕಂಠ ಸಿರಿಯಿಂದಲೇ ಹೆಸರುವಾಸಿ ಆಗಿದ್ದರು. ರೇಡಿಯೋ ಮಿರ್ಚಿ ಮೂಲಕ ಅವರು ತಮ್ಮ ರೇಡಿಯೋ ಜಾಕಿ ಪಯಣ ಆರಂಭಿಸಿ ನಂತರ ರೇಡಿಯೋ ಸಿಟಿ ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
ರಚನಾ ನಡೆಸಿಕೊಡುತ್ತಿದ್ದ ಸಾಕಷ್ಟು ಕಾರ್ಯಕ್ರಮಗಳು ಯಶಸ್ವಿಯಾಗಿದ್ದವು. ರಚನಾ ರೇಡಿಯೋ ಜಾಕಿ ಕೆಲಸವನ್ನು ಬಿಟ್ಟು ಏಳು ವರ್ಷಗಳು ಆಗಿತ್ತು. ಹಾಗೆಯೇ ಸ್ನೇಹಿತರ ವಲಯದಿಂದಲೂ ದೂರ ಉಳಿದಿದ್ದರು. ರಚನಾ ಅವರು ತುಂಬಾನೇ ಡಿಪ್ರೆಷನ್‌ನಲ್ಲಿ ಇದ್ದರು. ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನುತ್ತಿದೆ ರಚನಾ ಸ್ನೇಹಿತರ ಬಳಗ. ಹಾಗೆ ಖಿನ್ನತೆಯಿಂದ ಏನಾದರು ಹೆಚ್ಚು ಕಡಿಮೆ ಆಗಿರಬೇಕು ಅಂತಾ ಶಂಕಿಸಿದ್ದಾರೆ.
ಕಿರಿವಯಸ್ಸಿನಲ್ಲೇ ರಚನಾ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ರಚನಾ ಸಾವಿಗೆ ಆಪ್ತರು ಹಾಗೂ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.