ಬೆಂಗಳೂರು: ಜಾರಿ ನಿರ್ದೇಶನಾಲಯ(ಇಡಿ)ದಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದ ವೇಳೆ ಬಂದ್ ಮಾಡಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ನಷ್ಟವನ್ನುಂಟು ಮಾಡಿರುವ ಸಂಬಂಧ ಅಂದಾಜು ಮಾಡಿ ಹೊಣೆಗಾರಿಕೆಯನ್ನು ತನಿಖೆ ಮಾಡುವುದಕ್ಕಾಗಿ ಹೈಕೋರ್ಟ್ ನಿರ್ದೇಶಿಸಿತ್ತು. ಈ ಮೇರೆಗೆ ರಾಜ್ಯ ಸರ್ಕಾರ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಸಿ.ಆರ್. ಬೆನಕನಹಳ್ಳಿ ಅವರನ್ನು ಕ್ಲೈಮ್ ಕಮಿಷನರನ್ನಾಗಿ ನೇಮಕ ಮಾಡಿ ಆದೇಶಿಸಿದೆ.
ಮುಷ್ಕರದಿಂದ ಉಂಟಾದ ನಷ್ಟ ವಸೂಲಿ ಮಾಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಸಂಬಂಧ ಹೈಕೋರ್ಟ್ ಕ್ಲೈಮ್ ಕಮಿಷನರ್ ನೇಮಕ ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು. ಅದರಂತೆ ಸರ್ಕಾರ ಈ ಆದೇಶ ಹೊರಡಿಸಿದೆ.
ರಾಮನಗರದ ಪೊಲೀಸ್ ಭವನದ 3ನೇ ಮಹಡಿಯಲ್ಲಿ ಕ್ಲೈಮ್ ಕಮಿಷನರ್ ಅವರಿಗೆ ಕಚೇರಿಯನ್ನು ಒದಗಿಸಿದ್ದು, ಘಟನೆ ನಡೆದ ದಿನದಂದು ಸಂಗ್ರಹಿಸಿರುವ ಆಡಿಯೋ, ವಿಡಿಯೋ ಸೇರಿದಂತೆ ಇತರ ರೆಕಾರ್ಡಿಂಗ್, ದಾಖಲೆಗಳು, ಕ್ಲೈಮ್ ಕಮಿಷನರ್ ಅವರಿಗೆ ಸಲ್ಲಿಸಬಹುದಾಗಿದೆ. ದಾಖಲೆಗಳನ್ನು ಸಲ್ಲಿಸುವವರು ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ವಿಳಾಸದ ವಿವರಗಳೊಂದಿಗೆ ಕ್ಲೈಮ್ ಕಮಿಷನರ್ ಮುಂದೆ ಅಫಿಡವಿಟ್‍ನೊಂದಿಗೆ ಸಲ್ಲಿಸಬಹುದು.
ಅಫಿಡವಿಟ್ ಜೊತೆಗೆ ಲಿಖಿತ ಹೇಳಿಕೆ, ಆಡಿಯೋ, ವಿಡಿಯೋ, ಇತರ ರೆಕಾರ್ಡಿಂಗ್ಗಳನ್ನು ಕ್ಲೈಮ್ ಕಮಿಷನರ್ ಕಚೇರಿಯಲ್ಲಿನ ಅಧಿಕೃತ ಅಧಿಕಾರಿಗಳ ಕಚೇರಿ ಸಮುಯದಲ್ಲಿ ಸಲ್ಲಿಸಬಹುದು. ಜತೆಗೆ, ಅಫಿಡವಿಟ್‍ಗಳು ಮತ್ತು ರೆಕಾರ್ಡಿಂಗಳೊಂದಿಗೆ ಲಿಖಿತ ಹೇಳಿಕೆಗಳನ್ನು ಮತ್ತು ದಾಖಲಾತಿಗಳನ್ನು ಸಲ್ಲಿಸುವ ವ್ಯಕ್ತಿಗಳ ಮತ್ತು ಸಾಕ್ಷಿಗಳ ಪಟ್ಟಿಯಲ್ಲಿ ತೋರಿಸಿರುವ ವ್ಯಕ್ತಿಗಳು ಕ್ರೈಮ್ಸ್ ಕಮಿಷನರ್ ಅವರ ಮುಂದೆ ಹಾಜರಾಗಬೇಕಾಗುತ್ತದೆ.
ಮಹದಾಯಿ ಗಲಾಟೆ ನಷ್ಟ ವಸೂಲಿಗೆ ಕ್ಲೈಮ್ ಕಮಿಷನರ್ ನೇಮಕ : ಮಹದಾಯಿ ನದಿ ಸಮಸ್ಯೆಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಡೆದ ಬಂದ್ ಮತ್ತು ಮುಷ್ಕರದಿಂದ ಸಂಭವಿಸಿದ ಹಿಂಸಾತ್ಮಕ ಘಟನೆಗಳಿಂದ ಸಾರ್ವಜನಿಕ ಮತ್ತು ಖಾಸಗಿ ಸ್ವತ್ತುಗಳಿಗೆ ಉಂಟಾದ ನಷ್ಟವನ್ನು ಅಂದಾಜು ಮಾಡಿ ಹೊಣೆಗಾರಿಕೆ ಮಾಡುವುದಕ್ಕಾಗಿ ಹೈಕೋರ್ಟ್ ನಿದೇರ್ಶನದ ಮೇರೆಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಮೊಹಮ್ಮದ್ ಗೌಸ್ ಮೊಹಿದ್ದೀನ್ ಪಾಟೀಲ ಅವರನ್ನು ಕ್ಲೈಮ್ ಕಮಿಷನರ್ ಆಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.
ಧಾರವಾಡದ ಕೆಲಗೇರಿ ರಸ್ತೆಯ ಪ್ರಾಚಿ ಶಾಪಿ ಕಟ್ಟಡದ 1ನೇ ಮಹಡಿಯಲ್ಲಿ ಕಚೇರಿ ಕಾರ್ಯನಿರ್ವಹಿಸಲಿದ್ದು, ಅರ್ಜಿದಾರರು ಹಾಗೂ ಸಾರ್ವಜನಿಕರು ಘಟನೆ ಸಂಬಂಧ ಆಡಿಯೋ, ವಿಡಿಯೋ ಅಥವಾ ಇತರ ರೆಕಾರ್ಡಿಂಗ್‍ಗಳು ಮತ್ತು ದಾಖಲಾತಿಗಳನ್ನು ಹಾನಿ, ಅಪರಾಧಿಗಳನ್ನು ಗುರುತಿಸಲು ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳೊಂದಿಗೆ ಸರ್ಕಾರಿ ಕೆಲಸದ ದಿನಗಳಲ್ಲಿ ಸಲ್ಲಿಸಬಹುದಾಗಿದೆ. ಜತೆಗೆ, ಕಮಿಷನ್ ಕರೆದಲ್ಲಿ ವಿಚಾರಣೆಗೆ ಹಾಜರಾಗಬಹುದಾಗಿದೆ ಎಂದು ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹದಾಯಿ ಯೋಜನೆ ಬಗ್ಗೆ ಸ್ಪಷ್ಟ ನಿಲುವು ಘೋಷಿಸಿ : ಹಿಂದೆ ಪ್ರಧಾನಿ ಮೋದಿಯವರು ರಾಜ್ಯ ಪ್ರವಾಸ ಕೈಗೊಂಡಿದ್ದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮಹದಾಯಿ ಯೋಜನೆ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸುವಂತೆ ಕೇಳಿದ್ದರು. ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರೇ, ಮಹದಾಯಿ ನದಿ ನೀರಿನ ಯೋಜನೆಯ ಬಗ್ಗೆ ಕೇಂದ್ರ ಬಿಜೆಪಿ ಸರ್ಕಾರವು ಸ್ಪಷ್ಟ ನಿಲುವನ್ನು ಘೋಷಿಸಬೇಕು.
ಅಲ್ಲದೇ ಕಳೆದ ಎರಡು ವರ್ಷಗಳಿಂದ ಮುಚ್ಚಿಟ್ಟು ಈಗ ಅನುಮತಿ ನೀಡಿರುವುದು ನ್ಯಾಯದ ನಡೆಯೇ ಎಂದು ಪ್ರಶ್ನೆ ಮಾಡಿದ್ದರು. ಇನ್ನು ಗೋವಾ ಮುಖ್ಯಮಂತ್ರಿಗಳ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ನೀರಾವರಿ ಸಚಿವ ಗಜೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಡಿಪಿಆರ್ ಹಿಂಪಡೆಯುವಂತೆ ಮನವಿ ಮಾಡಿದೆಯಂತೆ. ಏನಿದು ಡಬಲ್ ಗೇಮ್ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದರು.
ಇದನ್ನೂ ಓದಿ : ಮಹದಾಯಿ ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟ ನಿಲುವು ಘೋಷಿಸಿ: ಪ್ರಧಾನಿಗೆ ಸಿದ್ದರಾಮಯ್ಯ ಒತ್ತಾಯ