ಬೆಂಗಳೂರು: ಮೂರು ತಿಂಗಳಿನೊಳಗೆ ರಾಜ್ಯದಲ್ಲಿರುವ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಆರ್.ಪ್ರಸನ್ನ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ದಾಖಲೆಯಲ್ಲಿ ಇಲ್ಲದ ತಾಂಡಾ, ಮಜರೆ, ಹಾಡಿ, ಹಟ್ಟಿ, ಕ್ಯಾಂಪ್, ಕಾಲೋನಿಗಳಲ್ಲಿ ಜನ ವಾಸ ಮಾಡುತ್ತಿದ್ದಾರೆ. ಸರ್ಕಾರ ಜನವಸತಿ ಘೋಷಣೆ ಮಾಡದೇ ಇದ್ದಲ್ಲಿ ಸರ್ಕಾರದಲ್ಲಿ ಇವು ದಾಖಲಾಗಲ್ಲ. ಹಾಗಾಗಿ ಇಂತಹ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇಡೀ ರಾಜ್ಯದಲ್ಲಿ 26 ಸಾವಿರಕ್ಕೂ ಹೆಚ್ಚು ಇಂತಹ ಸ್ಥಳಗಳು ಇವೆ ಎಂದು ಆರ್.ಡಿ.ಪಿ.ಆರ್ ಇಲಾಖೆ ಮಾಹಿತಿ ನೀಡಿದೆ. 50 ಕುಟುಂಬ, 250 ಜನ, 150 ಎಕರೆ ವಿಸ್ತೀರ್ಣದ ಜಮೀನು ಹೊಂದಿದ್ದಲ್ಲಿ ಅಂತಹ ಜನವಸತಿ ಪ್ರದೇಶವನ್ನು ಕಂದಾಯ ಗ್ರಾಮ ಎಂದು ಘೋಷಣೆ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಇನ್ನೊಂದು ವಾರದಲ್ಲಿ ಪತ್ರ ಬರೆಯುತ್ತೇನೆ. ಮೂರು ತಿಂಗಳಿನ ಗಡುವಿನಲ್ಲಿ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲು ಸೂಚನೆ ನೀಡುತ್ತೇನೆ ಎಂದರು.
ಸಹಾಯಧನ ಪಡೆಯಲು ಜನ ಮುಂದೆ ಬರುತ್ತಿಲ್ಲ: ನೆರೆಹಾನಿಯಿಂದ ಸೂರು ಕಳೆದುಕೊಂಡವರ ಸೂರು ಮರು ನಿರ್ಮಾಣಕ್ಕೆ ಐದು ಲಕ್ಷ ಸಹಾಯಧನ ನೀಡುವ ಯೋಜನೆಯಡಿ ಬಾಕಿ ಹಣ ಪಡೆದುಕೊಳ್ಳಲು ಫಲಾನುಭವಿಗಳು ಮುಂದೆ ಬರುತ್ತಿಲ್ಲ ಎಂದು ಇದೇ ವೇಳೆ ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು.
ತಿಮ್ಮಾಪೂರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸೂರು ಮರು ನಿರ್ಮಾಣ, ದುರಸ್ತಿಗೆ ಗಡುವು ಮೀರಿದ ನಂತರವೂ 4-5 ಸಾವಿರ ಅರ್ಜಿಗಳು ಬಂದಿವೆ. ಮಳೆ ಬಂದು ವರ್ಷ ಆಗಿದೆ. ಈಗಲೂ ಅರ್ಜಿ ಸೇರಿಸಿ ಎನ್ನುತ್ತಿದ್ದಾರೆ. ಇಲ್ಲಿ ರಾಜಕೀಯ ವ್ಯಕ್ತಿಗಳ ಲಾಬಿಯೂ ಇದೆ. ಇದರಲ್ಲಿ ರಾಜಕೀಯ ಸಲ್ಲದು, ಅರ್ಜಿ ಹಾಕಿದ ಎಲ್ಲರಿಗೂ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದರು.
ಓದಿ: ಜಾಮೀನಿನ ಮೇಲೆ ಹೊರಗಿರುವ ಯಡಿಯೂರಪ್ಪ ಸಿಎಂ ಹುದ್ದೆಯಲ್ಲಿ ಮುಂದುವರೆಯುವುದು ಸರಿಯೇ: ಸಿದ್ದರಾಮಯ್ಯ ಪ್ರಶ್ನೆ
ರಾಜ್ಯದಲ್ಲಿ 6,984 ಕೋಟಿ ರೂ. ಹಣವನ್ನು ಪ್ರವಾಹದ ಪರಿಹಾರ ಕಾರ್ಯಕ್ಕೆ ಬಿಡುಗಡೆ ಮಾಡಲಾಗಿದೆ. ಇನ್ನೂ ಹಣ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ಸೂರು ಕಳೆದುಕೊಂಡವರಲ್ಲಿ 5 ಲಕ್ಷ ರೂ. ಸಹಾಯಧನಕ್ಕೆ ಆಯ್ಕೆಯಾದವರು ಮೊದಲ ಕಂತು 1 ಲಕ್ಷ ಪಡೆದುಕೊಂಡು ಮನೆ ದುರಸ್ತಿ ಮಾಡಿಕೊಂಡಿದ್ದಾರೆ. ಹೊಸ ಮನೆ ಕಟ್ಟದ ಕಾರಣ ಬಾಕಿ ಕಂತು ಪಡೆದುಕೊಳ್ಳಲು ಬರುತ್ತಿಲ್ಲ ಎಂದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಸರ್ಕಾರದ ಹಣ ಪೋಲಾಗಬಾರದು, ಎಲ್ಲಾ ದುರುಪಯೋಗ ಆಗುತ್ತಿದೆ. ತಾರತಮ್ಯ ಬಹಳ ಕಡೆ ಆಗಿದೆ. ಗಟ್ಟಿ ಇದ್ದ ಮನೆಯನ್ನೂ ಐದು ಲಕ್ಷದ ಆಸೆಗೆ ಒಡೆದು ಹಾಕಿದ್ದಾರೆ. ಬೇರೆ ಪಕ್ಷದವರದ್ದು ಮನೆ ಬಿದ್ದರೂ ಕೊಟ್ಟಿಲ್ಲ. ಇಂತಹ ತಾರತಮ್ಯ ಸರಿಯಲ್ಲ. ಯಾರಿಗೆ ಅನ್ಯಾಯವಾಗಿದೆಯೋ ಅವರಿಗೆ ಸಹಾಯಧನ ಕೊಡಿ ಎಂದರು.
ಮಹಾಂತೇಶ್ ಕವಟಗಿಮಟ ಮಾತನಾಡಿ, ನಿಜವಾದ ಫಲಾನುಭವಿಗಳು ಈಗಲೂ ಉಳಿದಿದ್ದರೆ ಅವರಿಗೆ ಅವಕಾಶ ಕೊಡಿ. ಜಿಲ್ಲಾಧಿಕಾರಿಗಳ ಮೂಲಕ ವರದಿ ಪಡೆದು ಪರಿಹಾರ ನೀಡಿ ಎಂದು ಸಲಹೆ ನೀಡಿದರು. ನಂತರ ಉತ್ತರ ನೀಡಿದ ಆರ್.ಅಶೋಕ್, ಸ್ಕೀಮ್ ಸಿಯವರು ಬಿಗೆ ಸೇರಿಸಿ ಎಂದು, ಬಿನವರು ಎಗೆ ಸೇರಿಸಿ ಎನ್ನುತ್ತಿದ್ದಾರೆ. ಆದರೆ ಐದು ಲಕ್ಷಕ್ಕೆ ಆಯ್ಕೆಯಾದವರು ಉಳಿಕೆ ಹಣ ಪಡೆಯುತ್ತಿಲ್ಲ. ನಾವು ಮೊದಲ ಕಂತಾಗಿ ಮನೆ ಕಟ್ಟಲು ಒಂದು ಲಕ್ಷ ಕೊಟ್ಟಿದ್ದೇವೆ. ಆದರೆ ಕೆಲ ಫಲಾನುಭವಿಗಳು ಮನೆಗಳ ದುರಸ್ತಿ ಮಾಡಿಕೊಂಡಿದ್ದಾರೆ. ಉಳಿದ ಹಣ ಪಡೆಯಲು ಬರುತ್ತಿಲ್ಲ. ಹಣ ಪಡೆದುಕೊಳ್ಳಿ ಎಂದು ನೋಟಿಸ್ ನೀಡಿದರೂ ಬರುತ್ತಿಲ್ಲ. ಈ ಹಣ ಏನು ಮಾಡಬೇಕು ಎಂದು ಸಿಎಂ ಜೊತೆ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದರು.
ಪುನರ್ವಸತಿ ಕೇಂದ್ರ ಸ್ಥಾಪನೆ: ರಾಜ್ಯದಲ್ಲಿ ಪದೇ ಪದೆ ನೆರೆಹಾನಿ ಸಂಭವಿಸುವ ಪ್ರದೇಶಗಳಲ್ಲಿ ಪುನರ್ವಸತಿ ಕೇಂದ್ರಗಳ ನಿರ್ಮಾಣ ಮಾಡಲಾಗುತ್ತದೆ ಎಂದು ಸಚಿವ ಅಶೋಕ್ ಹೇಳಿದರು. ಪ್ರತಿ ವರ್ಷ ಕೃಷ್ಣಾ ಕೊಳ್ಳ ಸೇರಿದಂತೆ ಹಲವೆಡೆ ನೆರೆಹಾನಿ ಸಂಭವಿಸಿ ಜನರನ್ನು ತಾತ್ಕಾಲಿಕ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗುತ್ತದೆ. ಇದಕ್ಕಾಗಿ ಶಾಲಾ ಕಟ್ಟಡ ಬಳಸಿಕೊಳ್ಳಲಾಗುತ್ತಿದೆ. ಆದರೆ ಅಲ್ಲಿ ಸೌಲಭ್ಯಗಳಿಲ್ಲದ ಕಾರಣ ಜನ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹಾಗಾಗಿ ಎಲ್ಲಾ ವ್ಯವಸ್ಥೆ ಇರುವ ಪುನರ್ವಸತಿ ಕೇಂದ್ರ ನಿರ್ಮಿಸಲಾಗುತ್ತದೆ ಎಂದರು.