ಬೆಂಗಳೂರು: ಕಾಂಗ್ರೆಸ್‌ನವರು ಖಾಲಿಯಾಗಿರುವ ಅಡುಗೆ ಮನೆಯ ಡಬ್ಬ ಅಲ್ಲಾಡಿಸಿ, ಪಕ್ಕದ ಮನೆಯಿಂದ ಹೊರಬರುವ ಅಡುಗೆ ಪರಿಮಳ ನಮ್ಮ ಮನೆಯದ್ದೇ ಎಂದು ಹೇಳಿಕೊಂಡು ಓಡಾಡುತ್ತಾರೆ. ನಿಮ್ಮದು ಬರೀ ಯೋಚನೆ. ನಮ್ಮ ಸರ್ಕಾರದ್ದು ಯೋಜನೆ ಮತ್ತು ಜನಪರ ಕಾರ್ಯಾಚರಣೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ಕೊಟ್ಟರು.
ಸಿದ್ದರಾಮಯ್ಯನವರು ಇತ್ತೀಚೆಗೆ ನಾಮಕರಣ ಮಾಡಿಸುವ ಅಥವಾ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ ಅನಿಸುತ್ತಿದೆ. ನಮ್ಮ ಸರ್ಕಾರ ಯಾವುದೇ ಜನಪರ ಕಾರ್ಯಕ್ರಮ ಮಾಡಿದ್ರೂ ಅದನ್ನು ನಾನು ಅಧಿಕಾರದಲ್ಲಿ ಇದ್ದಾಗಲೇ ಯೋಚನೆ ಮಾಡಿದ್ದೆ, ಈ ಬಿಜೆಪಿ ಸರ್ಕಾರ ಕಾರ್ಯರೂಪಕ್ಕೆ ತಂದಿದೆ ಅಷ್ಟೇ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ನಿಮ್ಮ ಸರ್ಕಾರವಿದ್ದಾಗ ಯೋಚನೆ ಮಾಡಿದ್ದು ಸರಿ. ಆದರೆ, ಯಾಕೆ ಕಾಯ್ದೆ ಜಾರಿಗೆ ತಂದಿಲ್ಲ ಎಂದು ಪತ್ರಕರ್ತರು, ಜನಸಾಮಾನ್ಯರು ಕೇಳಿದ್ರೆ ಏ, ಸುಮ್ನಿರಪ್ಪ ನಾನು ಹೇಳೊದಷ್ಟೇ ಕೇಳು ಎಂದು ಬಾಯಿ ಮುಚ್ಚಿಸೋಕೆ ಬರುತ್ತಾರೆ. ಅಲ್ಲಿಗೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನವರು ಖಾಲಿಯಾಗಿರುವ ಅಡುಗೆ ಮನೆಯ ಡಬ್ಬ ಅಲ್ಲಾಡಿಸಿ, ಪಕ್ಕದ ಮನೆಯಿಂದ ಹೊರಬರುವ ಅಡುಗೆ ಪರಿಮಳ ನಮ್ಮ ಮನೆಯದ್ದೇ ಎಂದು ಹೇಳಿಕೊಂಡು ಓಡಾಡುತ್ತಾರೆ ಅಂತಾ ಪತ್ರಿಕಾ ಹೇಳಿಕೆಯಲ್ಲಿ ವ್ಯಂಗ್ಯವಾಡಿದ್ದಾರೆ.
ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಕೇವಲ ಘೋಷಣೆ ಮಾಡದೇ ಅವರ ಕೈಗೆ ಪ್ರಧಾನಿ ಮೋದಿಯವರ ಸಮ್ಮುಖದಲ್ಲೇ 52,072 ತಾಂಡಾದಲ್ಲಿ ವಾಸಿಸುವ ಕುಟುಂಬಕ್ಕೆ ಹಕ್ಕುಪತ್ರ ನೀಡುವ ಮೂಲಕ ಐತಿಹಾಸಿಕ ಕ್ರಮಕ್ಕೆ ಇಡೀ ಕಲ್ಯಾಣ ಕರ್ನಾಟಕ ಜಿಲ್ಲೆಯ ಜನ ಸಾಕ್ಷಿಯಾಗಿದ್ದಾರೆ. ಆದರೆ ಎಂದಿನಂತೆ ಸಿದ್ದರಾಮಯ್ಯನವರು ತಾಂಡಾಗಳನ್ನು ಕಂದಾಯ ಗ್ರಾಮ ಮಾಡುವ ಯೋಚನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಈಗ ಬಿಜೆಪಿ ಸರ್ಕಾರ ನಾವು ಮಾಡಿದ ಅಡುಗೆಯಲ್ಲಿ ಊಟ ಮಾಡುತ್ತಿದೆ ಎಂದು ಹೇಳಿ ಜನರ ದಾರಿತಪ್ಪಿಸುವ ಹೇಳಿಕೆ ನೀಡಿದ್ದಾರೆ ಎಂದು ಸಚಿವ ಅಶೋಕ್ ಟೀಕಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಹೇಳಿದಾಕ್ಷಣ ತನಿಖೆ ಮಾಡಲು ಸಾಧ್ಯವಿಲ್ಲ: ಸಚಿವ ಆರ್.ಅಶೋಕ್
ಸಿದ್ದರಾಮಯ್ಯನವರೇ, ನೀವು ಅಡುಗೆ ಮಾಡುವ ಮುನ್ನವೇ ನಿಮ್ಮ ಅಡುಗೆ ಮನೆ ಖಾಲಿ ಆಗಿತ್ತು. ಈಗ ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಂದಾಯ ಸಚಿವನಾಗಿ ನಾನು ಮುಂದೆ ನಿಂತು ಸಮೀಕ್ಷೆ ನಡೆಸಿ, ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಿ ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆ. ಇಂದು ಕಲ್ಯಾಣ ಕರ್ನಾಟಕ ಜಿಲ್ಲೆಯ ಎಲ್ಲಾ ತಾಂಡಾಗಳನ್ನು ಗ್ರಾಮ ಎಂದು ಘೋಷಣೆ ಮಾಡಿ ಹಕ್ಕುಪತ್ರ ನೀಡಿದ್ದೇವೆ. ಮುಂದೆಯೂ ನಮ್ಮ ಜನಪರ, ಅಭಿವೃದ್ಧಿ ಪರ ಮಾನವೀಯ ಕೆಲಸಗಳು ಮುಂದುವರಿಯಲಿದೆ. ಇದೇ ರೀತಿ ಕಾರ್ಯಕ್ರಮವನ್ನು ದಾವಣಗೆರೆಯಲ್ಲೂ ಮಾಡುವ ಮೂಲಕ ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಹಕ್ಕು ಪತ್ರ ನೀಡುತ್ತೇವೆ. ಸಿದ್ದರಾಮಯ್ಯನವರೇ ನೀವು ಆಗ ಮತ್ತೆ ಯಾವ ರೀತಿಯಲ್ಲಿ ಹೇಳಿಕೆ ನೀಡಬೇಕು ಎಂದು ಈಗಲೇ ಯೋಚಿಸಿ ಸಿದ್ಧರಾಗಿ. ಯಾಕೆಂದರೆ ನಿಮ್ಮದು ಬರಿ ಯೋಚನೆ, ನಮ್ಮ ಸರ್ಕಾರದ್ದು ಯೋಜನೆ ಮತ್ತು ಜನಪರ ಕಾರ್ಯಾಚರಣೆ ಎಂದು ಟಕ್ಕರ್ ಕೊಟ್ಟರು.
ಇದನ್ನೂ ಓದಿ: ಕಲಬುರಗಿ: ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಪ್ರಧಾನಿ ಮೋದಿ ಚಾಲನೆ
75 ವರ್ಷಗಳ ಕಾಲ ಹಿಂದುಳಿದವರ ಕಲ್ಯಾಣದ ಹೆಸರಲ್ಲಿ ನಿಮ್ಮ ಪಕ್ಷ ಮತ ಪಡೆಯಿತು. ಬಳಿಕ ನೀವು ಕಾಂಗ್ರೆಸ್ ಸೇರಿದ ಮೇಲೆ ಏಕಾಏಕಿ ಹಿಂದುಳಿದ ಸಮುದಾಯದ ಸ್ವಯಂ ಘೋಷಿತ ಚಾಂಪಿಯನ್ ಎಂದು ಕರೆದುಕೊಂಡಿದ್ದೀರಿ. ನಿಮ್ಮದು ಮತ ಬ್ಯಾಂಕ್ ರಾಜಕೀಯ. ನಮ್ಮದು ಅಭಿವೃದ್ಧಿ ಪಥದ ರಾಜಕೀಯ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ತತ್ವದಡಿ ನಾವು ಮುಂದೆ ಸಾಗುತ್ತೇವೆ. ಇಷ್ಟಾಗಿಯೂ ನೀವು ಮತ್ತು ನಿಮ್ಮ ಪಕ್ಷ ಹೀಗೆ ಖಾಲಿ ಡಬ್ಬ ಬಡಿಯುತ್ತಾ, ಯಾರೋ ಮಾಡಿದ ಕೆಲಸಕ್ಕೆ ನಾಮಕರಣ ಮಾಡುತ್ತಾ ಸಾಗುತ್ತಿರೋ ಅಥವಾ ಸುಳ್ಳು ಹೇಳುವುದನ್ನು ನಿಲ್ಲಿಸಿ ಅಭಿವೃದ್ಧಿಗೆ ಬೆಂಬಲಿಸುತ್ತಿರೋ ಸರಿಯಾಗಿ ಯೋಚಿಸಿ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.