ಬೆಂಗಳೂರು: ನೆರೆ ಸಂತ್ರಸ್ತರ ಹಣ ದುರ್ಬಳಕೆ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಇಂದು ನೈಸರ್ಗಿಕ ವಿಪತ್ತು ಪರಾಮರ್ಶೆ ಕುರಿತು ನಡೆದ ಸಚಿವ ಸಂಪುಟ ಉಪಸಮಿತಿ ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಸಚಿವರು, ನೊಂದವರಿಗೆ ತೊಂದರೆ ಮಾಡಿದರೆ. ಅವರ ಹಣ ಲೂಟಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ, ಮಧ್ಯವರ್ತಿಗಳ ಮೇಲೆ ನಿಗಾ ಇಡಲು ರಾಜ್ಯ ಮಟ್ಟದಲ್ಲಿ ವಿಶೇಷ ತಂಡ ರಚನೆ ಮಾಡುತ್ತಿದ್ದೇವೆ. ಯಾವ ಅಧಿಕಾರಿಯೂ ಸಹ ಮಧ್ಯವರ್ತಿ ಬಳಿ ಹೋಗಬಾರದು. ಹಣ ದುರ್ಬಳಕೆ ಆದರೆ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಮಳೆಯಿಂದ ರಾಜ್ಯದಲ್ಲಿ ಭಾರಿ ನಷ್ಟವಾಗಿದೆ. 87 ಜನ ಮೃತಪಟ್ಟಿದ್ದಾರೆ. 2067 ಜಾನುವಾರು ಸತ್ತಿವೆ. 7.82 ಲಕ್ಷ ಹೆಕ್ಟೇರ್ ನಷ್ಟು ಬೆಳೆ ಹಾನಿಯಾಗಿದೆ. 2.37 ಲಕ್ಷ ಮನೆ ಬಿದ್ದಿವೆ.6.96 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ಇದರಲ್ಲಿ 4.67 ಲಕ್ಷ ಜನರನ್ನು ಸಂತ್ರಸ್ತರ ಶಿಬಿರಕ್ಕೆ ಶಿಫ್ಟ್ ಮಾಡಲಾಗಿದೆ . ಈ ಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಮ್ಮ ನೆರವಿಗೆ ಬಂದಿದೆ. 42 ಕೇಂದ್ರ ರಕ್ಷಣಾ ತಂಡಗಳನ್ನು ರಾಜ್ಯಕ್ಕೆ ಕಳುಹಿಸಿದೆ ಎಂದು ಮಾಹಿತಿ ನೀಡಿದರು.
1554 ಟಿಎಂಸಿ ನೀರು ರಾಜ್ಯದ ಜಲಾಶಯಗಳಿಗೆ ಹರಿದು ಬಂದಿದೆ. ಆದರೆ ಸಂಗ್ರಹ ಮಾಡೋದು 831 ಟಿಎಂಸಿ ಮಾತ್ರ ಎಂದು ಹೇಳಿದರು. ಅಧಿಕಾರಿಗಳು ಈ ಸಂದರ್ಭದಲ್ಲಿ ರಜೆ ಇಲ್ಲದೇ ಕೆಲಸ ಮಾಡಬೇಕು ಎಂದ ಅವರು, ಸಂತ್ರಸ್ತರ ಅಕೌಂಟ್ ಗೆ ನೇರವಾಗಿ ಹಣ ಹಾಕಲಾಗುತ್ತಿದೆ. ಚೆಕ್ ನೀಡಿದರೆ ಸಂತ್ರಸ್ತರಿಗೆ ತಲುಪುವುದಿಲ್ಲವೆಂಬ ಕಾರಣಕ್ಕೆ ನೇರವಾಗಿ ಸಂತ್ರಸ್ತರ ಖಾತೆಗೆ ಆರ್ ಟಿ ಜಿಎಸ್ ಮಾಡಲಾಗುತ್ತಿದೆ ಎಂದರು.
ನಾವು ಸಹ ನೆರೆ ಪ್ರದೇಶಗಳಲ್ಲಿ ಸಮೀಕ್ಷೆ ಮಾಡಿದ್ದೇವೆ. ಜೊತೆಗೆ ಕೇಂದ್ರ ಅಧ್ಯಯನ ತಂಡ ಪರಿಶೀಲನೆ ನಡೆಸಿ ಹೋಗಿದೆ. ಎರಡು ದಿನದಲ್ಲಿ ಕೇಂದ್ರಕ್ಕೆ ನೆರೆ ಹಾನಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ಎಂದು ವಿವರಿಸಿದರು.ನೆರೆ ಪೀಡಿತ ಪ್ರದೇಶಗಳಿಗೆ ಹೋಗೋದು ನನ್ನ ಕರ್ತವ್ಯ. ಕೇಂದ್ರ ತಂಡ ಮೊದಲು ಬಂದಿದ್ದೇ ಕರ್ನಾಟಕಕ್ಕೆ. ನಾವು ಕಳುಹಿಸಿದ ವರದಿ ಕೇಂದ್ರಕ್ಕೆ ಹೋದ ತಕ್ಷಣ ಪರಿಹಾರ ಬರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಅಶೋಕ್ ಉತ್ತರಿಸಿದರು.ಈ ವೇಳೆ ವಸತಿ ಸಚಿವ ವಿ.ಸೋಮಣ್ಣ ಉಪಸ್ಥಿತರಿದ್ದರು.