ಬೆಂಗಳೂರು: ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಅನ್ನ ಮಾತ್ರ ಕೊಡುವಂತಿಲ್ಲ, ಚಪಾತಿಯನ್ನೂ ಕಡ್ಡಾಯವಾಗಿ ನೀಡಬೇಕು ಎಂದು ಕೋವಿಡ್ ಉಸ್ತುವಾರಿ ಹೊತ್ತಿರುವ ಕಂದಾಯ ಸಚಿವ ಆರ್. ಅಶೋಕ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಿ.ವಿ ರಾಮನ್ ನಗರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೊರೊನಾ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ನೀಡುತ್ತಿರುವ ಊಟದ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ಕೇವಲ ಅನ್ನ, ಸಾಂಬಾರ್ ನೀಡುತ್ತಿರುವುದಾಗಿ ರೋಗಿಗಳಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಸ್ಥಳದಿಂದಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಊಟ ವಿತರಣೆಯ ವಿಡಿಯೋ ಮಾಡಿ ಕಳಿಸುವಂತೆ ಸೂಚನೆ ನೀಡಿ, ನಂತರ ನಾಳೆಯಿಂದ ಸಿ.ವಿ.ರಾಮನ್ ನಗರ ಕೋವಿಡ್ ಆಸ್ಪತ್ರೆಯಲ್ಲಿ ಊಟದ ವ್ಯವಸ್ಥೆ ಬದಲಿಸಲು ಸ್ಥಳದಲ್ಲಿಯೇ ಆದೇಶ ಹೊರಡಿಸಿದರು. ಪ್ರತಿದಿನ ಚಪಾತಿ, ಪಲ್ಯ, ಅನ್ನ, ಸಾಂಬರ್, ಮೊಸರು, ತುಪ್ಪ ನೀಡುವ ಜೊತೆಗೆ ಹಣ್ಣುಗಳನ್ನು ನೀಡಲು ಸೂಚನೆ ನೀಡಿದರು.
ಬೆಂಗಳೂರಿನ ಎಲ್ಲಾ ಕೋವಿಡ್ ಆಸ್ಪತ್ರೆಯಲ್ಲಿಯೂ ಊಟದ ಮೆನು ಸರಿಯಾಗಿ ಪಾಲನೆಯಾಗಬೇಕು. ಕೇವಲ ಅನ್ನ ಸಾಂಬರ್ ಅಷ್ಟೆ ಎಲ್ಲಿಯೂ ಕೊಡಬಾರದು. ಚಪಾತಿ ಊಟ ಕಡ್ಡಾಯ ಎಂದು ಎಲ್ಲಾ ಕೋವಿಡ್ ಆಸ್ಪತ್ರೆಗಳಿಗೂ ಅಶೋಕ್ ಕಟ್ಟುನಿಟ್ಟಿನ ಸೂಚನೆ ನೀಡಿದರು.