ಬೆಂಗಳೂರು: ಸಂಸತ್ ಚುನಾವಣಾ ಫಲಿತಾಂಶ ಬಂದ ಕೆಲವೇ ದಿನಗಳಲ್ಲಿ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಜನರು ಕಾಂಗ್ರೆಸ್ ಕೈಹಿಡಿದಿದ್ದಾರೆ. ಹೀಗಾಗಿ ಇವಿಎಂ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ಗೆ ಮತ್ತೆ ಅನುಮಾನ ಮೂಡಿದೆಯಂತೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, 509 ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಒಂದೊಂದು ಚುನಾವಣೆಯಲ್ಲೂ ಒಂದೊಂದು ರೀತಿಯ ಫಲಿತಾಂಶ ಬರುತ್ತಿದೆ. ಇದು ಒಳ್ಳೆಯ ಫಲಿತಾಂಶ. ಈ ಫಲಿತಾಂಶ ನೋಡಿದರೆ, ಲೋಕಸಭಾ ಚುನಾವಣೆ ಬಗ್ಗೆ ಆಶ್ಚರ್ಯವಾಗುತ್ತಿದೆ. ಇವಿಎಂಗಳ ವಿಚಾರದಲ್ಲಿ ಚುನಾವಣಾ ಆಯೋಗ ಇನ್ನೂ ಸ್ಪಷ್ಟನೆ ನೀಡಿಲ್ಲವೆಂದು ಹೇಳಿದರು.
ಲೋಕಸಭಾ ಚುನಾವಣಾ ಫಲಿತಾಂಶ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ನೋಡಿದ್ರೆ ಆಶ್ಚರ್ಯವಾಗುತ್ತಿದೆ. ಈ ಫಲಿತಾಂಶ ನಮಗೆ ಶಕ್ತಿ ನೀಡಿದಂತಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದೆ. ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಕಾಂಗ್ರೆಸ್ ಜನ ಬೆಂಬಲ ಕಳೆದುಕೊಂಡಿದೆ ಎಂದು ಆರೋಪಿಸುವ ಬಿಜೆಪಿ ನಾಯಕರು ಈ ಫಲಿತಾಂಶ ನೋಡಿ ಎಂದು ದಿನೇಶ್ ಟಾಂಗ್ ಕೊಟ್ಟರು.
ಮತದಾನದ ಸಂಖ್ಯೆ ಹಾಗೂ ಮತ ಎಣಿಕೆ ವೇಳೆ ಬಂದಿರುವ ಸಂಖ್ಯೆಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಪೋಲಿಂಗ್ ಆಗಿದ್ದಕ್ಕಿಂತ ಹೆಚ್ಚು ಮತಗಳ ಎಣಿಕೆ ಆಗಿದೆ ಎಂಬ ವರದಿ ಸಹ ಬರುತ್ತಿದೆ. ಈ ಬಗ್ಗೆ ಇನ್ನು ಚುನಾವಣಾ ಆಯೋಗ ಉತ್ತರ ಕೊಟ್ಟಿಲ್ಲ. ಅಲ್ಲದೆ, ಕೇಂದ್ರ ಚುನಾವಣಾ ಆಯೋಗ ಪ್ರತಿಪಕ್ಷಗಳಿಗೆ ತೃಪ್ತಿಕರವಾದ ಸ್ಪಷ್ಟನೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಆಗ್ರಹಿಸಿದ್ದಾರೆ.
ಇವಿಎಂ ಯಂತ್ರಗಳ ದೋಷದ ಬಗ್ಗೆ ಈಗಲೇ ನಾನು ಏನು ಹೇಳಲ್ಲ. ಆದ್ರೆ ಆ ಬಗ್ಗೆ ಒಂದಿಷ್ಟು ಅನುಮಾನಗಳು ನಮಗಿವೆ. ಲೋಕಸಭಾ ಚುನಾವಣಾ ಫಲಿತಾಂಶ ನೋಡಿ ನಾವೆಲ್ಲೋ ತಪ್ಪು ಮಾಡಿದ್ದೇವೆ ಏನೋ ಅಂತ ಅಂದುಕೊಂಡಿದ್ವಿ. ಆದ್ರೆ ಜನ ನಮ್ಮನ್ನ ಕೈ ಬಿಟ್ಟಿಲ್ಲ ಅನ್ನೋದು ಸ್ಥಳೀಯ ಸಂಸ್ಥೆಗಳಲ್ಲಿ ಸ್ಪಷ್ಟವಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.