ಬೆಂಗಳೂರು : ವಿಧಾನಸೌಧದ ಕಾರಿಡಾರ್ ಮತ್ತು ಮೊಗಸಾಲೆಗಳಲ್ಲಿ ಮಾಧ್ಯಮಗಳು ಚಿತ್ರೀಕರಣ ಮಾಡಲು ಮತ್ತು ಫೋಟೋ ತೆಗೆಯಲು ನಿರ್ಬಂಧ ವಿಧಿಸಿ ಸರ್ಕಾರ ವಿವಾದಾತ್ಮಕ ಆದೇಶ ಹೊರಡಿಸಿದೆ. ಆ ಮೂಲಕ ಮಾಧ್ಯಮಗಳನ್ನು ವಿಧಾನಸೌಧದಿಂದ ಹೊರಗಿಡುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ.
ಕೆಂಗಲ್ ಗೇಟ್ ಬಳಿ ಹಾಗೂ ಅಧಿಕೃತ ಸಚಿವರ ಕಚೇರಿ ಹೊರತುಪಡಿಸಿ ವಿಧಾನಸೌಧದ ಕಾರಿಡಾರ್‌ನಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಸರ್ಕಾರ ಆದೇಶಿಸಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆದೇಶದ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ವಿವಾದಿತ ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಿಎಸ್ವೈ, ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ವೇಳೆ ಹೆಚ್ ಡಿ ಕುಮಾರಸ್ವಾಮಿ ಮಾಧ್ಯಮಗಳನ್ನು ವಿಧಾನಸೌಧದ ಮೊದಲ ಮಹಡಿಗೆ ಸೀಮಿತಗೊಳಿಸುವ ಯತ್ನ ನಡೆಸಿದ್ದರು. ನಂತರ ಈ ಪ್ರಯತ್ನಕ್ಕೆ ತೀವ್ರ ವಿರೋಧ ಮತ್ತು ಟೀಕೆ ಎದುರಿಸಿದ್ದರು. ಈಗ ಬಿಜೆಪಿ ಸರ್ಕಾರ ಅಂತಹುದೇ ಆದೇಶ ಮಾಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ.
ಆದೇಶದಲ್ಲೇನಿದೆ? : ವಿಧಾನಸಭೆ ಹಾಗೂ ಪರಿಷತ್ತಿನ ಕಲಾಪಗಳು ಹಾಗೂ ಇನ್ನಿತರೆ ಸಂದರ್ಭಗಳಲ್ಲಿ ಕೆಲವು ಪತ್ರಿಕಾ/ವಿದ್ಯುನ್ಮಾನ ಮಾಧ್ಯಮದವರು ವಿಧಾನಸೌಧ ಕಟ್ಟಡದ ಕಾರಿಡಾರ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಇದು ಕೆಲ ಸಂದರ್ಭದಲ್ಲಿ ವ್ಯಕ್ತಿಗಳ ಸುಗಮ ಚಲನವಲನಕ್ಕೆ ಅಡ್ಡಿಯುಂಟಾಗಿರುವುದು ಗಮನಕ್ಕೆ ಬಂದಿದೆ. ಗಣ್ಯರ ಸುಗಮ ಚಲನೆ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳಿಂದ ಹೇಳಿಕೆ ಪಡೆಯುವ ಸಲುವಾಗಿ ವಿಧಾನಸೌಧದ ಕೆಂಗಲ್ ದ್ವಾರದ ಬಳಿ ಅವಕಾಶ ಕಲ್ಪಿಸಲಾಗಿದೆ.
ಇನ್ನುಮುಂದೆ ನಿರ್ದಿಷ್ಟ ಪಡಿಸಿದ ಜಾಗವನ್ನು ಹೊರತುಪಡಿಸಿ ಕಾರಿಡಾರ್‌ಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದನ್ನು ಭದ್ರತೆ ಹಾಗೂ ಶಿಸ್ತನ್ನು ಕಾಪಾಡುವ ಹಿನ್ನೆಲೆ ನಿರ್ಬಂಧಿಸುವುದು ಸೂಕ್ತ ಎನ್ನುವ ಪ್ರಸ್ತಾವನೆ ಮುಖ್ಯಮಂತ್ರಿಗಳಿಂದ ಅನುಮೋದಿಸಲ್ಪಟ್ಟಿದೆ ಎಂದು ಸುತ್ತೋಲೆ ಹೊರಡಿಸಿದೆ.
ಸಚಿವರು ಇಲಾಖೆಯ ಪ್ರಗತಿ ಹಾಗೂ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರ ತಿಳುವಳಿಕೆಗೆ ತರುವ ಸಲುವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡುವ ಸಂದರ್ಭದಲ್ಲಿ ಸಭಾ ಕೊಠಡಿಗಳು ಅಥವಾ ಸಂಬಂಧಪಟ್ಟ ಸಚಿವರುಗಳ ಕೊಠಡಿಗಳಲ್ಲಿಯೇ ವ್ಯವಸ್ಥೆಗೊಳಿಸುವುದು ಸೂಕ್ತವಾಗಿರುತ್ತದೆ. ಅದರಂತೆ ಸಚಿವರುಗಳ ಆಪ್ತ ಕಾರ್ಯದರ್ಶಿಗಳು ಇನ್ನು ಮುಂದೆ ಅಗತ್ಯ ಕ್ರಮವಹಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.