ಬೆಂಗಳೂರು: ವಿಧಾನ ಪರಿಷತ್ನಲ್ಲಿ ಅವಿಶ್ವಾಸ ನಿರ್ಣಯ ನೋಟಿಸ್ ವಿಚಾರದಲ್ಲಿ ನಡೆದ ಹೈಡ್ರಾಮಾ ನಂತರ ಬಿಜೆಪಿ, ಜೆಡಿಎಸ್ ಕಾನೂನು ಹೋರಾಟಕ್ಕೆ ಮುಂದಾದರೆ ಪ್ರತಿಯಾಗಿ ಕಾನೂನು ಹೋರಾಟ ನಡೆಸುವ ಕುರಿತು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಚಿಂತನೆ ನಡೆಸಿದ್ದಾರೆ.
ವಿಧಾನ ಪರಿಷತ್ನಲ್ಲಿ ನಡೆದ ಘಟನಾವಳಿ ನಂತರ ಬಿಜೆಪಿ - ಜೆಡಿಎಸ್ ಸದಸ್ಯರು ರಾಜಭವನದ ಕದ ತಟ್ಟಿದ್ದು, ರಾಜ್ಯಪಾಲರಿಂದ ಏನಾದರೂ ನಿರ್ದೇಶನ ಬರಲಿದೆಯಾ? ಎಂದು ಇಡೀ ದಿನ ತಮ್ಮ ಕಚೇರಿಯಲ್ಲೇ ಕುಳಿತು ಸಭಾಪತಿ ಎದುರು ನೋಡಿದರು. ಒಂದು ವೇಳೆ ರಾಜಭವನದಿಂದ ನಿರ್ದೇಶನ ಬಂದರೆ ರಾಜೀನಾಮೆ ಕೊಡುವ ಬಗ್ಗೆ, ಕಾನೂನು ಸಾಧಕ - ಬಾಧಕಗಳ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದರು. ಕಾಂಗ್ರೆಸ್ ಸದಸ್ಯರ ಜೊತೆಯಲ್ಲೂ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.
ಓದಿ: ಮ್ಯೂಸಿಕಲ್ ಚೇರ್ನಂತಾದ ಸಭಾಪತಿ ಪೀಠ: ಹತ್ತು ನಿಮಿಷದ ಹೈಡ್ರಾಮಾದಲ್ಲಿ ನಾಲ್ವರಿಂದ ಪೀಠಾಲಂಕಾರ!
ಒಂದು ವೇಳೆ, ಬಿಜೆಪಿ ಕಾನೂನು ಹೋರಾಟಕ್ಕೆ ಮುಂದಾದರೆ, ಬಿಜೆಪಿ- ಜೆಡಿಎಸ್ ವಿರುದ್ಧ ಕಾನೂನು ಹೋರಾಟ ನಡೆಸಲು ಕಾಂಗ್ರೆಸ್ ನಾಯಕರು ಪ್ರತಾಪ್‌ಚಂದ್ರ ಶೆಟ್ಟಿ ಅವರಿಗೆ ಸಲಹೆ ನೀಡಿದರು.
ರಾಜೀನಾಮೆಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಚಿಂತನೆ
ಹೈಡ್ರಾಮಾದ ನಂತರ ಜೆಡಿಎಸ್ ಅವಿಶ್ವಾಸದ ಪರ ಪತ್ರವನ್ನು ರಾಜ್ಯಪಾಲರಿಗೆ ನೀಡಿದ ಹಿನ್ನೆಲೆ ಈಗಾಗಲೇ ರಾಜೀನಾಮೆಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಚಿಂತನೆ ನಡೆಸಿದ್ದು, ಯಾವಾಗ ಯಾವ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನುವುದು ಸದ್ಯಕ್ಕೆ ನಿಗೂಢವಾಗಿದೆ.
ರಾಜ್ಯಪಾಲರಿಂದ ಸಂಜೆಯವರೆಗೂ ಯಾವುದೇ ನಿರ್ದೇಶನ ಬಾರದ ಹಿನ್ನೆಲೆ ಸಂಜೆ 6 ಗಂಟೆಗೆ ಸಭಾಪತಿಗಳು ವಿಧಾನಸೌಧದಿಂದ ತೆರಳಿದರು. ಪರಿಷತ್ ನಲ್ಲಿ ನಡೆದ ಘಟನೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಕೈಮುಗಿದು ತಮ್ಮ ಸರ್ಕಾರಿ ನಿವಾಸಕ್ಕೆ ತೆರಳಿದರು.