ಬೆಂಗಳೂರು: ಸದನದಲ್ಲಿ ಮೈತ್ರಿ ಸರ್ಕಾರದ ಶಾಸಕರು ಕಾಲಹರಣ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ನಂಬಿಕೆ ಇದ್ದರೆ ಬಹುಮತ ಸಾಬೀತುಪಡಿಸಿ ಇಲ್ಲವಾದರೆ ರಾಜೀನಾಮೆ ಕೊಟ್ಟು ಮನೆಗೆ ನಡೆಯಿರಿ ಎಂದು ಸಿ.ಎಂ. ಹೆಚ್.ಡಿ.ಕೆ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಹರಿಹಾಯ್ದರು.
ಯಲಹಂಕದ ರಮಡ ರೆಸಾರ್ಟ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಸ್ಪೀಕರ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಕಾಲಹರಣ ಮಾಡ್ತಿದೆ. ಗವರ್ನರ್ ಕೊಟ್ಟ ಸಮಯಕ್ಕೆ ಬಹುಮತ ಯಾಚಿಸಬೇಕಿತ್ತು. ಸಿಎಂ ಓಡಿ ಹೋಗುವ ಸ್ಥಿತಿಯಲ್ಲಿದ್ದಾರೆ. ಅವರ ಶಾಸಕರನ್ನು ಹಿಡಿದಿಟ್ಡುಕೊಳ್ಳಲಾಗದೆ ಗೋಗರೆಯುತ್ತಿದ್ದಾರೆ. ಅತೃಪ್ತ ಶಾಸಕರು ತಮ್ಮನೋವನ್ನ ಹೇಳಿಕೊಂಡಾಗ ಸ್ಪಂದಿಸಲಿಲ್ಲ. ಇದೀಗ, ಶಾಸಕರು ಕಣ್ಮರೆಯಾಗಿದ್ದಾರೆ ಎಂದು ಸದನದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯಪಾಲರು ಸ್ಪೀಕರ್ ಹಾಗೂ ಸಿಎಂಗೆ ಬಹುಮತ ಸಾಬೀತುಪಡಿಸುವಂತೆ ಎರೆಡೆರಡು ಬಾರಿ ನಿರ್ದೇಶನ ನೀಡಿದ್ದರು. ಇನ್ನ, ಸುಪ್ರೀಂಕೋರ್ಟ್ ಆದೇಶಕ್ಕೆ ರಾಜ್ಯದಲ್ಲಿ ಬೆಲೆ ಇಲ್ಲ. ಇದರಿಂದ ರಾಜ್ಯದಲ್ಲಿ ಸಂವಿಧಾನಿಕ ಬಿಕ್ಕಟ್ಟು ನಿರ್ಮಾಣ ಆಗಿದೆ. ನಮ್ಮದು ಪ್ರಜಾತಂತ್ರ ದೇಶ. ಪ್ರಜಾಪ್ರಭುತ್ವದಲ್ಲಿ ಸಂವಿಧಾನಿಕ ಬಿಕ್ಕಟ್ಟು ತಲೆದೋರಿದೆ. ಸಂವಿದಾನದಲ್ಲಿ ನಂಬಿಕೆ ಇದ್ದರೆ ಬಹುಮತ ಸಾಬೀತು ಪಡಿಸಿ. ಇಲ್ಲವಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಮೈತ್ರಿ ಸರ್ಕಾರಕ್ಕೆ ಚಾಟಿ ಬೀಸಿದರು.
ಯಾವ ಅಬ್ದುಲ್ ಖಾನ್ ಕೂಡಾ ಗೊತ್ತಿಲ್ಲ:
ರಹೀಮ್ ಖಾನ್ರನ್ನ ಬಿಜೆಪಿಗೆ ಕರೆತರಲು ಶೋಭಾಕರಂದ್ಲಾಜೆ ಪೋನ್ ಮೂಲಕ ಸಂಪರ್ಕಿಸಿದ್ದಾರೆ ಎಂಬ ಈಶ್ವರ ಖಂಡ್ರೆ ಹೇಳಿಕೆಗೆ ಆಕ್ರೋಶಗೊಂಡು ಪ್ರತಿಕ್ರಿಯಿಸಿದ ಕರಂದ್ಲಾಜೆ ಈಶ್ವರ್ ಖಂಡ್ರೆ ಯಾಕೆ ಸುಳ್ಳು ಹೇಳ್ತಿದ್ದಾರೆ ಗೊತ್ತಾಗುತ್ತಿಲ್ಲ. ರಹೀಂ ಖಾನ್ ಯಾರು? ಬಿಜೆಪಿಗೂ ಅವರಿಗೂ ಏನು ಸಂಬಂಧವಿಲ್ಲ ಎಂದರು. ನಾನು ರಹೀಂಖಾನ್ ಜೊತೆ ಮಾತನಾಡಿರುವ ಸಾಕ್ಷ್ಯಾಧಾರಗಳಿದ್ದರೆ ಬಹಿರಂಗಪಡಿಸಿ. ಸಿ.ಎಂ.ಕುಮಾರಸ್ವಾಮಿಯವರು ಬಿಜೆಪಿಯ ಎಲ್ಲಾ ನಾಯಕರ ಮೊಬೈಲ್ ನಂಬರ್ಸ್ ಟ್ರಾಪ್ ಮಾಡಿಸುತ್ತಿದ್ದಾರೆ. ನಾನು ಮಾತನಾಡಿದ್ದರೆ ಬಹಿರಂಗಪಡಿಸಲಿ. ನಮಗೆ ಯಾವ ಅಬ್ದುಲ್ ಖಾನ್ ಸಂಬಂಧವೂ ಬೇಡ ಎಂದರು.
ಐಎಂಎ ಪ್ರಕರಣದ ಮುಖ್ಯ ರೂವಾರಿಯನ್ನು ಇ.ಡಿ.ಯವರು ಬಂಧಿಸಿದ್ದಾರೆ. ಆ ಪ್ರಕರಣದಲ್ಲಿ ಯಾವ ಯಾವ ಖಾನ್ಗಳು ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ರಾಜ್ಯದ, ದೇಶದ ಎಲ್ಲರಿಗೂ ಗೊತ್ತಾಗಲಿದೆ ಎಂದು ಶೋಭಾ ಕರಂದ್ಲಾಜೆ ಕುಟುಕಿದರು.