ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಷಡ್ಯಂತ್ರ ಸುಪ್ರೀಂ ಕೋರ್ಟ್‌ನಲ್ಲಿ ಬಹಿರಂಗವಾಗಿದೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ತಿಳಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ವಕ್ತಾರ ರಮೇಶ್ ಬಾಬು ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳದ ವಿಚಾರವಾಗಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ಗೆ ರಾಜ್ಯ ಬಿಜೆಪಿ ಸರ್ಕಾರ ತನ್ನ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ. ಅಫಿಡವಿಟ್ ಸಲ್ಲಿಸುವವರೆಗೂ ಸರ್ಕಾರದ ಆದೇಶ ಜಾರಿಗೆ ಬರಲು ಸಾಧ್ಯವೇ ಇಲ್ಲ. ಆ ಮೂಲಕ ಬಿಜೆಪಿ ಸರ್ಕಾರ ಮೀಸಲಾತಿ ಹೆಸರಿನಲ್ಲಿ ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರಿಗೆ ಮಾಡಿದ ಮೋಸ ಮತ್ತೊಮ್ಮೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಬಯಲಾಗಿದೆ ಎಂದು ಹೇಳಿದರು.
ಬೊಮ್ಮಾಯಿ ಅವರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಈ ನೂತನ ಮೀಸಲಾತಿ ಆಧಾರದ ಮೇಲೆ ಯಾವುದೇ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಯಾವುದೇ ತಯಾರಿ, ಯೋಜನೆ ಇಲ್ಲದೇ ಕೇವಲ ರಾಜ್ಯದ 6.50 ಕೋಟಿ ಕನ್ನಡಿಗರಿಗೆ ದ್ರೋಹ ಬಗೆಯಲು ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳದ ಆದೇಶ ನೀಡಿತ್ತು ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.
ನಾವು ಆರಂಭದಿಂದಲೂ ಹೇಳುತ್ತಿದ್ದಂತೆ, ಬೊಮ್ಮಾಯಿ ಅವರ ಸರ್ಕಾರದ ಮೀಸಲಾತಿ ಹೆಚ್ಚಳದ ವಿಚಾರವು ಎಲ್ಲ ಸಮುದಾಯಗಳಿಗೆ ನಂಬಿಕೆ ದ್ರೋಹ ಬಗೆಯುವ ಷಡ್ಯಂತ್ರವಾಗಿತ್ತು. ಮೀಸಲಾತಿ ಹೆಚ್ಚಳದ ಆದೇಶ ಹೊರಡಿಸಿರುವ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಈ ಆದೇಶಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಕೆ ಮಾಡಲು ಸಾಧ್ಯವಾಗಿಲ್ಲ. ಇದೆಲ್ಲದರ ಪರಿಣಾಮ ಸರ್ಕಾರದ ಪಿತೂರಿ ಸುಪ್ರೀಂ ಕೋರ್ಟ್ ನಲ್ಲಿ ಬಹಿರಂಗವಾಗಿದೆ. ಕಳೆದ 90 ದಿನಗಳಲ್ಲಿ ಈ ಸರ್ಕಾರ ಮೀಸಲಾತಿ ವರ್ಗೀಕರಣವನ್ನು 3 ಬಾರಿ ಬದಲಿಸಿತ್ತು. ಇದು ಸರ್ಕಾರದ ಅಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಸಮಾಜಗಳನ್ನು ಒಡೆದು, ಅವರಲ್ಲಿ ದ್ವೇಷ ಬಿತ್ತುವ ಬೊಮ್ಮಾಯಿ ಸರ್ಕಾರದ ಷಡ್ಯಂತ್ರ ಸ್ಪಷ್ಟವಾಗಿದೆ ಎಂದು ಅಪಾದಿಸಿದರು.
ಜನಸಂಖ್ಯೆ ಆಧಾರಿತ ಮೀಸಲಾತಿ ನೀಡಬೇಕು: ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ ಶೇ.17ಕ್ಕೆ. ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.4ಕ್ಕೆ ಏರಿಕೆ ಮಾಡಿದ ಪರಿಣಾಮ ಮೀಸಲಾತಿ ಪ್ರಮಾಣ ಶೇ.50ರ ಮಿತಿಯನ್ನು ದಾಟಿದೆ. ಈ ವಿಚಾರವನ್ನು ನಾವು ಆರಂಭದಿಂದಲೂ ಹೇಳುತ್ತಿದ್ದು, ಈ ಸಮುದಾಯಗಳಿಗೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ರಾಹುಲ್ ಗಾಂಧಿ ಅವರು ಕೋಲಾರದ ಜೈ ಭಾರತ ಸಮಾವೇಶದಲ್ಲಿ ಆಗ್ರಹಿಸಿದ್ದಾರೆ ಎಂದರು.
ಬಿಜೆಪಿ ಸರ್ಕಾರದಿಂದ ಸಮಾಜದ ಸ್ವಾಸ್ಥ್ಯ ನಾಶ:ಲಿಂಗಾಯತ ಸಮುದಾಯ ಶೇ.15ರಷ್ಟು ಮೀಸಲಾತಿ ಹೆಚ್ಚಳಕ್ಕೆ, ಒಕ್ಕಲಿಗ ಸಮುದಾಯ ಶೇ.12ರಷ್ಟು ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿದರೆ, ಬೊಮ್ಮಾಯಿ ಅವರ ಸರ್ಕಾರ ಕೇವಲ ತಲಾ ಶೇ.2ರಷ್ಟು ಮಾತ್ರ ಹೆಚ್ಚಳ ಮಾಡಿದೆ. ಎಲ್ಲ ಲಿಂಗಾಯತ ಸ್ವಾಮೀಜಿಗಳು ಹಾಗೂ ನಾಯಕರು ಈ ತೀರ್ಮಾನಕ್ಕೆ ಬೇಸರವಾಗಿದ್ದಾರೆ. ಈ ಕುತಂತ್ರದಿಂದ ಬಿಜೆಪಿ ಸರ್ಕಾರ ಸಮಾಜದ ಸ್ವಾಸ್ಥ್ಯ ನಾಶ ಮಾಡುತ್ತಿದೆ. ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಲಾಲಿಪಾಪ್ ನೀಡಿದ್ದು, ಅದರಲ್ಲಿ ಕೇವಲ ಕಡ್ಡಿ ಇದೆಯೇ ಹೊರತು ಬೇರೇನೂ ಇಲ್ಲವಾಗಿದೆ ಎಂದರು.
ಶೆಟ್ಟರ್ಗೆ ಐಟಿ ದಾಳಿ ಬೆದರಿಕೆ: ರಮೇಶ್ ಬಾಬು ಮಾತನಾಡಿ, ದೇಶದ ಎಲ್ಲಾ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಸಿಬಿಐ, ಇಡಿ, ಐಟಿ ಸಂಸ್ಥೆಗಳನ್ನು ಕಾಂಗ್ರೆಸ್ ಸೇರಿದಂತೆ ಎಲ್ಲ ವಿರೋಧ ಪಕ್ಷಗಳ ಮೇಲೆ ದುರುಪಯೋಗ ಮಾಡಿಕೊಂಡಿರುವುದನ್ನು ನೋಡಿದ್ದೇವೆ. ದುರಂತ ಎಂದರೆ ಜಗದೀಶ್ ಶೆಟ್ಟರ್ ಅವರ ಆಶ್ರಯದಲ್ಲಿ ರಾಜಕೀಯ ಆರಂಭಿಸಿದ ಪ್ರಹ್ಲಾದ್ ಜೋಶಿ ತಮ್ಮ ಅಧಿಕಾರದ ದರ್ಪದಿಂದ ಎರಡು ದಿನಗಳ ಹಿಂದೆ ಜಗದೀಶ್ ಶೆಟ್ಟರ್ ಅವರ ಮನವೊಲಿಕೆ ಪ್ರಯತ್ನದ ವೇಳೆ ಐಟಿ ದಾಳಿ ಬೆದರಿಕೆ ಹಾಕಿದ್ದಾರೆ.ಕೇಂದ್ರ ಸಚಿವ ಜೋಷಿ ಅವರು ನೀವು ಬಿಜೆಪಿ ತೊರೆದರೆ ಮುಂದಿನ ದಿನಗಳಲ್ಲಿ ಐಟಿ, ಇಡಿ, ಸಿಬಿಐ ಕ್ರಮ ಎದುರಿಸಬೇಕಾಗುತ್ತದೆ ಎಂಬ ಬೆದರಿಕೆ ಹಾಕಿದ್ದಾರೆ ಎಂದು ವಿವರಣೆ ನೀಡಿದರು. ಮೂಲತಃ ಜಗದೀಶ್ ಶೆಟ್ಟರ್ ಅವರು ವಕೀಲರಾಗಿದ್ದು, ಅವರು ಜೋಷಿ ಅವರಿಗೆ ತಾವು ವಕೀಲರು ನಿಮ್ಮ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಹೇಳಿ ಬಿಜೆಪಿ ಬಿಡುವ ಧೃಡ ನಿರ್ಧಾರಕ್ಕೆ ಬಂದರು. ಅವರು ತಮ್ಮ ಸ್ವಾಭಿಮಾನ ಹಾಗೂ ರಾಜಕೀಯ ಇಚ್ಛಾಶಕ್ತಿಗಾಗಿ ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
ಜೋಷಿ ರಾಜೀನಾಮೆ ನೀಡಲಿ: ಕೇಂದ್ರ ಸಚಿವರಾಗಿ ಜೋಷಿ ಅವರು ಮಾಜಿ ಮುಖ್ಯಮಂತ್ರಿಗೆ ಇಡಿ ಐಟಿ ಬೆದರಿಕೆ ಒಡ್ಡಿರುವುದು ಸರಿಯಲ್ಲ. ಹೀಗಾಗಿ ಜೋಷಿ ಅವರು ರಾಜ್ಯದ ಜನರಿಗೆ ಹಾಗೂ ಜಗದೀಶ್ ಶೆಟ್ಟರ್ ಅವರ ಬಳಿ ಕ್ಷಮೆ ಕೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೇಂದ್ರದ ಅಧಿಕಾರ ದುರ್ಬಳಕೆ ಮಾಡಿಕೊಂಡು ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳ ನಾಯಕರಿಗೆ ಬೆದರಿಕೆ ಹಾಕಲು ಮುಂದಾಗಿರುವುದು ಸರಿಯಲ್ಲ. ಇದೆಲ್ಲದಕ್ಕೂ ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.