ಬೆಂಗಳೂರು: ಕೋವಿಡ್, ಲಾಕ್ ಡೌನ್, ಕರ್ಫ್ಯೂ ಎಲ್ಲಾ ಅಡೆತಡೆಗಳು ಮುಗಿದಿದ್ದರೂ ವಸತಿ ಯೋಜನೆಗಳು ಕುಂಟುತ್ತಾ ಸಾಗಿವೆ. ಈಗಾಗಲೇ ಕೋವಿಡ್ ಹಿನ್ನೆಲೆಯಲ್ಲಿ ವಸತಿ ಯೋಜನೆಗಳಿಗೆ 18 ತಿಂಗಳು ಗಡುವು ವಿಸ್ತರಿಸಿದ್ದರೂ, 375 ಕ್ಕೂ ಹೆಚ್ಚು ವಸತಿ ಸಮುಚ್ಚಯಗಳ ಯೋಜನೆಗಳು ಪೂರ್ಣಗೊಂಡಿಲ್ಲ.
ಇದರಿಂದ ಸಾವಿರಾರು ಗೃಹ ಖರೀದಿರಾರು ತೊಂದರೆಗೆ ಸಿಲುಕಿರುವುದರಿಂದ, ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಬಿಲ್ಡರ್ ಗಳ ವಿರುದ್ಧ ಬರುತ್ತಿರುವ ದೂರು ಆಧರಿಸಿ ಅವರಿಗೆ ದಂಡ ವಿಧಿಸುವುದಲ್ಲದೆ, ಕಾನೂನು ಕ್ರಮಕ್ಕೆ ಮುಂದಾಗಿದೆ.
ಇನ್ನೊಂದೆಡೆ, ಬಿಲ್ಡರ್ಗಳು ಇನ್ನಷ್ಟು ಕಾಲಾವಕಾಶ ಬೇಕು, ಯೋಜನೆ ಗಡುವು 6 ತಿಂಗಳು ವಿಸ್ತರಿಸಬೇಕೆಂದು ಮನವಿ ಮಾಡುತ್ತಿದ್ದಾರೆ. ಆದರೆ ನಿಗಧಿತ ಅವಧಿಗೆ ಯೋಜನೆ ಮುಕ್ತಾಯಗೊಳ್ಳದ ಕಾರಣ ಗೃಹ ಖರೀದಿದಾರರು ಸಂಕಷ್ಟಕ್ಕೆ ಸಿಲುಕಿದ್ದು, ವಸತಿ ಯೋಜನೆಯಲ್ಲಿ ಹಣ ತೊಡಗಿಸಲು ಮಾಡಿದ ಸಾಲದಿಂದ ಕಣ್ಣೀರು ಹಾಕುವಂತಾಗಿದೆ.
ಇತ್ತ ದಿನಬಳಕೆ ವಸ್ತುಗಳು, ಕೋವಿಡ್ ಸಮಯದಲ್ಲಾದ ಉದ್ಯೋಗ ನಷ್ಟ, ಸಂಬಳ ಕಡಿತದಿಂದ ಹಲವಾರು ಮಂದಿ ತೊಂದರೆಗೊಳಗಾಗಿದ್ದಾರೆ. ಇತ್ತ ಸ್ವಂತ ಸೂರು ಪಡೆಯುವ ಕನಸೂ ಸಾಕಾರವಾಗದೆ, ಬಿಲ್ಡರ್‌ಗಳ ವಿನಾಕಾರಣ ವಿಳಂಬದಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ.
ನಿಯಮದಂತೆ ನಿಗದಿತ ಅವಧಿಗೆ ಯೋಜನೆ ಪೂರ್ಣಗೊಳಿಸದ ಬಿಲ್ಡರ್‌ಗಳ ಮೇಲೆ ಯಾವುದೇ ಮೃದು ಧೋರಣೆ ತಾಳದೇ, ಫ್ಲ್ಯಾಟ್ ನ ಮೌಲ್ಯಕ್ಕೆ ಶೇ.9 ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕಾಗುತ್ತದೆ ಎಂದು ರೇರಾ ಜಾರಿಗೆ ಶ್ರಮಿಸುತ್ತಿರುವ ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದ್ದಾರೆ. ಯೋಜನೆಗಳನ್ನು ಸಮಯೋಜಿತವಾಗಿ ಪೂರ್ಣಗೊಳಿಸುವುದು ಮತ್ತು ಗ್ರಾಹಕರಿಗೆ ತಲುಪಿಸುವಲ್ಲಿ ರೇರಾ ಕಾರ್ಯ ಮಹತ್ವದ್ದಾಗಿದೆ.