ಬೆಂಗಳೂರು: ರಾಜ್ಯದಲ್ಲಿ ಮೀಸಲಾತಿ ಹೋರಾಟ ನಡೆಯುತ್ತಿರುವ ನಡುವೆಯೇ ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಒಕ್ಕಲಿಗ ಸಮುದಾಯ ಬೇಡಿಕೆಯಿಟ್ಟಿದ್ದು, ಒಕ್ಕಲಿಗ ಸಮುದಾಯಕ್ಕೆ ಪ್ರಾಧಿಕಾರ ರಚನೆ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದ್ದಾರೆ.
ಒಕ್ಕಲಿಗರಿಗೆ ಪ್ರವರ್ಗ 3ಎನಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.10ಕ್ಕೆ ಹೆಚ್ಚಿಸಬೇಕು ಹಾಗೂ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮತ್ತು ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಮುಖ್ಯಮಂತ್ರಿಗಳಿಗೆ ಬರೆದಿರುವ ಎರಡು ಪ್ರತ್ಯೇಕ ಮನವಿಗಳನ್ನು ಆದಿಚುಂಚನಗಿರಿ ಮಠದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಸ್ವೀಕರಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ, ಒಕ್ಕಲಿಗ ಸಮುದಾಯಕ್ಕೆ ತ್ವರಿತವಾಗಿ ಪ್ರಾಧಿಕಾರ ರಚನೆ ಮಾಡಲೇಬೇಕು. ಕನಿಷ್ಠ 1000 ಕೋಟಿ ರೂಪಾಯಿ ಅನುದಾನ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ: ಸಿಎಂಗೆ ಆರ್ಥಿಕ ಕ್ಷೇತ್ರದ ಬಜೆಟ್ ಶಿಫಾರಸು ಸಲ್ಲಿಸಿದ ಎಫ್‍ಕೆಸಿಸಿಐ
ಸಮುದಾಯದ ಎಲ್ಲ 115 ಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಸದ್ಯ ಕೆಲವೇ ಪಂಗಡಗಳನ್ನು ಸೇರ್ಪಡೆ ಮಾಡಲಾಗಿದೆ. ಇದರಿಂದ ಎಲ್ಲ 115 ಉಪ ಜಾತಿಗಳಿಗೆ ನ್ಯಾಯ ಸಿಗುತ್ತಿಲ್ಲ ಎಂದರು.
ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಗ್ರಾಮೀಣ ಒಕ್ಕಲಿಗ ಸಮುದಾಯಗಳನ್ನು ಮಾತ್ರ ಸೇರ್ಪಡೆ ಮಾಡಲಾಗಿದೆ. ನಗರ ಪ್ರದೇಶಗಳಲ್ಲಿಯೂ ಬಡವರು ಇದ್ದಾರೆ. ಬೆಂಗಳೂರಿನಲ್ಲಿ ಆರ್ಥಿಕ ಚಟುವಟಿಕೆಗಳಿಗಾಗಿ ಭೂಮಿ ಕಳೆದುಕೊಂಡ ಲಕ್ಷಾಂತರ ಒಕ್ಕಲಿಗರು ಇಂದು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೂ ನ್ಯಾಯ ಒದಗಿಸಬೇಕು. ಆದ್ದರಿಂದ ನಗರ ಪ್ರದೇಶದ ಒಕ್ಕಲಿಗರನ್ನು ಒಬಿಸಿ ಪಟ್ಟಿಗೆ ಸೇರ್ಪಡೆ. ಮಾಡಬೇಕು. ಹಿಂದಿನ ಸರ್ಕಾರ ನಡೆಸಿರುವ ಜಾತಿ ಸಮೀಕ್ಷೆಯನ್ನು ಯಾವುದೇ ಕಾರಣಕ್ಕೂ ಸರ್ಕಾರ ಒಪ್ಪಿಕೊಳ್ಳಬಾರದು. ಈ ವರದಿ ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದರು.
ನಂಜಾವಧೂತ ಸ್ವಾಮೀಜಿ ಮಾತನಾಡಿ, ಶೀಘ್ರವೇ ಪ್ರಾಧಿಕಾರ ರಚಿಸಿ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಬೇಕು. ಒಕ್ಕಲಿಗರ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಪೂರಕವಾಗಿ ಸ್ಪಂದಿಸಬೇಕು. ಕೃಷಿಯನ್ನೇ ನಂಬಿಕೊಂಡ ಒಕ್ಕಲಿಗ ಇಂದು ಅತಂತ್ರನಾಗಿದ್ದಾನೆ. ಆದ್ದರಿಂದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ಮತ್ತು ನಿಗಮ ರಚನೆ ಆಗಲೇಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಸಚಿವ ಆರ್.ಅಶೋಕ್, ಒಕ್ಕಲಿಗರ ಮೀಸಲಾತಿ ಹೆಚ್ಚಳ, ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಒಕ್ಕಲಿಗ ಸಮುದಾಯದ ಎಲ್ಲ 115 ಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಒಕ್ಕಲಿಗ ಸಮುದಾಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಈ ಎಲ್ಲ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಜಂಟಿ ಸಮಿತಿಯಿಂದ ಮಹದಾಯಿ ಸ್ಥಳ ಪರಿಶೀಲನೆಗೆ ಸುಪ್ರೀಂಕೋರ್ಟ್ ಆದೇಶ : ರಮೇಶ್ ಜಾರಕಿಹೊಳಿ ಸ್ಪಷ್ಟನೆ
ಒಕ್ಕಲಿಗ ಅಭಿವೃದ್ಧಿ ನಿಗಮ ರಚಿಸಿ 1000 ಕೋಟಿ ರೂಪಾಯಿ ಅನುದಾನ ನೀಡಲು ಬೇಡಿಕೆ ಸಲ್ಲಿಸಲಾಗಿದೆ. ಈಗಾಗಲೇ ಒಕ್ಕಲಿಗ ಸಮುದಾಯಕ್ಕೆ ನಿಗಮ ರಚನೆ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗಿದೆ. ಒಕ್ಕಲಿಗ ಸಮುದಾಯದ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಒಕ್ಕಲಿಗ ಸಮುದಾಯಕ್ಕೆ 3ಎ ಅಡಿಯಲ್ಲಿ ಶೇ. 7ರಷ್ಟು ಮೀಸಲಾತಿ ಸಿಗುತ್ತಿದೆ. ಈ ಪ್ರವರ್ಗಕ್ಕೆ ಒಕ್ಕಲಿಗರೇತರ ಜಾತಿಗಳನ್ನು ಸೇರ್ಪಡೆ ಮಾಡಲಾಗಿದೆ. ಅಲ್ಲದೆ ಒಕ್ಕಲಿಗ ಜನ ಸಂಖ್ಯೆ ಶೇ.17 ರಷ್ಟಿದ್ದು ಮೀಸಲಾತಿಯನ್ನು ಶೇ.10 ರಷ್ಟು ಹೆಚ್ಚಳ ಮಾಡಲು ಬೇಡಿಕೆ ಸಲ್ಲಿಸಲಾಗಿದೆ. ಹಿಂದಿನ ಸರ್ಕಾರ ನಡೆಸಿದ್ದ ಜಾತಿ ಸಮೀಕ್ಷೆಯನ್ನು ಒಪ್ಪಿಕೊಳ್ಳಬಾರದು ಎಂದೂ ಮನವಿ ಮಾಡಲಾಗಿದೆ. ಈ ಎಲ್ಲ ಮನವಿ ಕುರಿತು ಮುಖ್ಯಮಂತ್ರಿ ಮತ್ತು ಸರ್ಕಾರದ ಜತೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಆರ್.ಅಶೋಕ್ ಭರವಸೆ ನೀಡಿದರು.