ಬೆಂಗಳೂರು: ದಕ್ಷಿಣ ಕನ್ನಡ: ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ವಿರೋಧಿಸಿ ವಿವಿದೆಡೆ ಕೌನ್ಸಿಲಿಂಗ್‍ಗೆ ಹಾಜರಾಗದೇ ಶಿಕ್ಷಕರು ಬಹಿಷ್ಕರಿಸಿದ್ದು, ಕಡ್ಡಾಯ ವರ್ಗಾವಣೆ ಕೈಬಿಡುವಂತೆ ಆಗ್ರಹಿಸಿದ್ದಾರೆ.
ಬೆಂಗಳೂರಿನ ಬಸವನಗುಡಿಯ ಶಾಲೆಯಲ್ಲಿ ಕೌನ್ಸಲಿಂಗ್ ಪ್ರಕ್ರಿಯೆ ನಡೆಯುತ್ತಿದ್ದು, ಕಡ್ಡಾಯ ವರ್ಗಾವಣೆ ಪ್ರಕ್ರಿಯೆಗೆ ವಿರೋಧ ವ್ಯಕ್ತ ಪಡಿಸಿದರು. ಶೇಕಡ 83ರಷ್ಟು ಜನರಿಗೆ ವಿನಾಯಿತಿ, ಉಳಿದವರಿಗೆ ಎಲ್ಲೆಂದರಲ್ಲಿ ವರ್ಗಾಯಿಸಲಾಗುತ್ತಿದೆ. ಸರ್ಕಾರ ಮನಬಂದಂತೆ ಶಿಕ್ಷಕರನ್ನು ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ನಾವೆಲ್ಲ 55 ವರ್ಷ ಮೇಲ್ಪಟ್ಟವರು, ನಮಗೆ ಈಗ ಕಡ್ಡಾಯವಾಗಿ ಬೇರೆ ಹಳ್ಳಿಗೆ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಹಿರಿಯ ಶಿಕ್ಷಕಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
97 ಶಿಕ್ಷಕರ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಶಿಕ್ಷಣ ಇಲಾಖೆಯ ಕಡ್ಡಾಯ ವರ್ಗಾವಣೆ ನೀತಿಯನ್ನು ಖಂಡಿಸಿ ದ.ಕ.ಜಿಲ್ಲೆಯ ವರ್ಗಾವಣೆಯ ಲಿಸ್ಟ್ ನಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರು ನಗರದ ಲೇಡಿಹಿಲ್ ವಿಕ್ಟೋರಿಯಾ ಶಾಲೆಯಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಹತ್ತು ವರ್ಷಗಳ ಕಾಲ ನಗರದಲ್ಲಿ ದುಡಿಯುವ ನಮ್ಮನ್ನು ಕಡ್ಡಾಯ ವರ್ಗಾವಣೆ ಅಡಿ ಬೇರೆ ಶಾಲೆಗಳಿಗೆ ಕಳುಹಿಸುವ ಹುನ್ನಾರ ನಡೆಯುತ್ತಿದೆ. ಈಗ ವರ್ಗಾವಣೆಯ ಪಟ್ಟಿಯಲ್ಲಿರುವ ಮಹಿಳಾ ಶಿಕ್ಷಕಿಯರು ಎಲ್ಲರೂ ವಯಸ್ಸಾದವರು. ಮನೆಗಳನ್ನು ತೊರೆದು ಹೊರ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವೇ ಎಂದು ಅವರು ಅಳಲು ತೋಡಿಕೊಂಡರು.
ಈ ಸಂದರ್ಭ ಡಿಡಿಪಿಐ ಅಧಿಕಾರಿ ಹಾಗೂ ರಾಜ್ಯ ಶಿಕ್ಷಕರ ಸಂಘದ ಅಧಿಕಾರಿಗಳು ಈ ಬಗ್ಗೆ ತಾವೇನು ಮಾಡುವಂತಿಲ್ಲ. ಶಿಕ್ಷಕರು ಈಗಿರುವ ವ್ಯವಸ್ಥೆ ಯಂತೆ ತಮಗೆ ಬೇಕಾದ ಕಡೆಗಳ ಶಾಲೆಗಳನ್ನು ಆಯ್ಕೆ ಮಾಡಬಹುದು. ಇಲ್ಲದಿದ್ದರೆ ತಮ್ಮ ಹೆಸರುಗಳು ಡಮ್ಮಿ ಕೌನ್ಸೆಲಿಂಗ್ ಆಗುತ್ತದೆ. ಇದರಿಂದ ತೊಂದರೆಯಾದಲ್ಲಿ ಯಾರಿಂದಲೂ ಸರಿಪಡಿಸಲು ಸಾಧ್ಯವಿಲ್ಲ ಎಂದರು.
ಶಿರಸಿ ಜಿಲ್ಲೆಯಲ್ಲಿ ಗೊಂದಲದ ಗೂಡಾಗಿದೆ. ನಿಯಮವನ್ನು ಗಾಳಿಗೆ ತೂರಿ ಅಧಿಕಾರಿಗಳು ವರ್ಗಾವಣೆ ನಡೆಸುತ್ತಿದ್ದಾರೆಂದು ಆರೋಪಿಸಿ ಹಲವು ಶಿಕ್ಷಕರು ಕೌನ್ಸಿಲಿಂಗ್‍ಗೆ ಗೈರಾಗಿದ್ದು, ಕೆಲವರು ಸ್ವಯಂ ನಿವೃತ್ತಿ(ವಿಆರ್ಎಸ್)ನತ್ತ ಒಲವು ತೋರಿದ ಪ್ರಸಂಗ ಶನಿವಾರ ಡಿಡಿಪಿಐ ಕಚೇರಿಯಲ್ಲಿ ನಡೆದಿದೆ.