ಬೆಂಗಳೂರು: ರಾಮನಗರ ಕಾರಾಗೃಹದಲ್ಲಿ ಇರಿಸಲಾಗಿದ್ದ ಪಾದರಾಯನಪುರದ ಗಲಭೆಕೋರರ ಪೈಕಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆ ಕೈದಿಗಳನ್ನು ಸಕಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತಕ್ಷಣವೇ ಸ್ಥಳಾಂತರಿಸಬೇಕು. ಇಲ್ಲವಾದರೇ ನಾಳೆಯಿಂದ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
![Request to evict the accused](https://etvbharatimages.akamaized.net/etvbharat/prod-images/6915807_660_6915807_1587664143063.png)
ಇದೇ ವಿಷಯವಾಗಿ ಸರ್ಕಾರದ ಗಮನಕ್ಕೆ ಸೆಳೆದಿದ್ದೇನೆ. ಅವರು ನಿರ್ಲಕ್ಷಿಸಿದರ ಫಲವಾಗಿ ಇಂದು ರಾಮನಗರಕ್ಕೂ ಕೊರೊನಾ ಸೋಂಕು ಕಾಲಿಟ್ಟಿದೆ. ಸರ್ಕಾರದ ಅವಿವೇಕದ ನಿರ್ಧಾರದಿಂದ ರಾಮನಗರ ಜಿಲ್ಲೆಯ ಜನ ಭೀತಿಗೊಂಡಿದ್ದಾರೆ. ಇನ್ನೂ ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಈಗಾಗಲೇ ರಾಜ್ಯದಲ್ಲಿ 445 ಸೋಂಕಿತರು ಪತ್ತೆಯಾಗಿದ್ದಾರೆ. 18 ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಎಂಟು ಜಿಲ್ಲೆಗಳು ಮಾತ್ರ ಸೋಂಕು ಮುಕ್ತವಾಗಿವೆ. ಅವುಗಳಲ್ಲಿ ರಾಮನಗರವೂ ಒಂದಾಗಿತ್ತು. ಇದೀಗ ಸರ್ಕಾರ ತೆಗೆದುಕೊಂಡ ಯೆಡವಟ್ಟು ನಿರ್ಧಾರ ರಾಮನಗರದಲ್ಲೂ ಸೋಂಕು ಹರಡುವ ಭೀತಿ ಎದುರಾಗಿದೆ ಎಂದರು.
ಜೈಲಿನ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಬೇಕು. ಅಡುಗೆ ತಯಾರಕರು ಸೇರಿದಂತೆ ಎಲ್ಲರ ಮೇಲೆ ನಿಗಾ ವಹಿಸಬೇಕು ಎಂದು ಹೇಳಿದರು.