ಬೆಂಗಳೂರು: ಬಿಎಂಟಿಸಿ ಸಿಬ್ಬಂದಿ ದಿನನಿತ್ಯ ನಗರದ ಟ್ರಾಫಿಕ್ನಲ್ಲಿ ಹಾಗೂ ಅದೆಷ್ಟೋ ಜನರ ನಡುವೆ ಕೆಲಸ ಮಾಡ್ತಾರೆ. ಇದ್ರಿಂದ ಇವರೆಲ್ಲ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಹಾಗಾಗಿ ಸಿಬ್ಬಂದಿ ಆರೋಗ್ಯದ ತಪಾಸಣೆ ಮಾಡಲು ಕೆಲ ತಿಂಗಳ ಹಿಂದೆಯಷ್ಟೇ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ನಿಮ್ಹಾನ್ಸ್ ನಿರ್ದೇಶಕ ಗಂಗಾಧರಯ್ಯ ಬಳಿ ಮನವಿ ಮಾಡಿದ್ದರು.
ಈ ಮನವಿಗೆ ಸ್ಪಂದಿಸಿರೋ ಆಸ್ಪತ್ರೆ ವೈದ್ಯರು, ಇದೀಗ 15 ಬಿಎಂಟಿಸಿ ನೌಕರರ ತಂಡವನ್ನು ತಪಾಸಣೆಗೊಳಪಡಿಸಿ, ಚಿಕಿತ್ಸೆ ಆರಂಭಿಸಿದೆ. ಆದರೆ, ಈ ಚಿಕಿತ್ಸೆ ನೀಡುವ ವೇಳೆ ವೈದ್ಯರಿಗೆ ಕಂಡು ಬಂದ ವಿಚಾರ ಎಲ್ಲರನ್ನೂ ಆತಂಕಗೊಳಿಸಿದೆ. ಅದೇನಂದ್ರೆ, ಬಿಎಂಟಿಸಿ ನೌಕರರಲ್ಲಿ ಹೆಚ್ಚು ಮಾನಸಿಕ ಒತ್ತಡ ಕಂಡು ಬಂದಿದೆ. ಈ ಹಿನ್ನೆಲೆ ಇವರಿಗೆ ಚಿಕಿತ್ಸೆ ಹಾಗೂ ಕೌನ್ಸೆಲಿಂಗ್ ಮಾಡಲಾಗ್ತಿದೆ.
ಜೊತೆಗೆ ಬಿಎಂಟಿಸಿ ನೌಕರರಿಗಾಗಿಯೇ ವಿಶೇಷ ಕ್ಲಿನಿಕ್ ಕೂಡಾ ಮಾಡಲಾಗಿದೆ. ಪ್ರತ್ಯೇಕವಾಗಿ ನರ ಸಂಬಂಧಿ ಖಾಯಿಲೆ ಇರುವವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ. ಹೆಚ್ಚು ಕೆಲಸವೇ ಈ ಮಾನಸಿಕ ಒತ್ತಡಕ್ಕೆ ಕಾರಣ ಎಂದು ಹೇಳಲಾಗ್ತಿದೆ. ಈ ನೌಕರರ ವರದಿಯನ್ನು ನಿಮ್ಹಾನ್ಸ್ ಸಿದ್ದಪಡಿಸಿದೆ. ಹೀಗಾಗಿ ಅನೇಕರಿಗೆ ಇಲ್ಲಿಯೇ ಚಿಕಿತ್ಸೆ ನೀಡಲಾಗ್ತಿದೆ. ಪ್ರತಿ ತಿಂಗಳಿಗೆ ಎರಡು ಬಾರಿ ಬಂದು ಚಿಕಿತ್ಸೆ ಪಡೆಯಲು ವೈದ್ಯರು ಸೂಚನೆ ನೀಡಿದ್ದಾರೆ. ಸದ್ಯ ಬಿಎಂಟಿಸಿಯ ಸಿಬ್ಬಂದಿ ಯಾರೇ ಬಂದರೂ ಅವರಿಗೆ ಚಿಕಿತ್ಸೆ ನೀಡುವಂತೆ ಮನವಿ ಮಾಡಲಾಗಿದೆ.