ಬೆಂಗಳೂರು: ಹದಿನೇಳು ಜನರಿಂದ ಅಂತ ನಾನೂ ಎಲ್ಲೂ ಹೇಳಿಲ್ಲ. ಬಿಜೆಪಿಯ 105 ಮತ್ತು ಕಾಂಗ್ರೆಸ್, ಜೆಡಿಎಸ್ನಿಂದ 17 ಮಂದಿ ಬಂದಿದ್ದರಿಂದಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಎಂದು ಹೇಳಿದ್ದೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಯುಟರ್ನ್ ಹೊಡೆದಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 17 ಜನ ಅಂತ ನಾನು ಎಲ್ಲೂ ಹೇಳಿಲ್ಲ. 17 ಮಂದಿ ಬಂದಿದ್ದರಿಂದಲೇ ಅಧಿಕಾರಕ್ಕೆ ಬಂದಿದ್ದು, ನಿಮ್ಮ ತ್ಯಾಗವೂ ಇದೆ, ನಮ್ಮ ಕೊಡುಗೆಯೂ ಇದೆ. ಒಬ್ಬ ವ್ಯಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ ಅಂತ ಹೇಳಿದ್ದೇನೆ ಎಂದು ಎಂಟಿಬಿ ನಾಗರಾಜ್ ತಿರುಗೇಟಿಗೆ ರೇಣುಕಾಚಾರ್ಯ ಸ್ಪಷ್ಟನೆ ನೀಡಿದರು.
ಸಂಪುಟ ವಿಸ್ತರಣೆ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳು, ವರಿಷ್ಠರು ಆ ಬಗ್ಗೆ ನಿರ್ಧಾರ ಮಾಡ್ತಾರೆ. ನನಗಿಂತ ನಿಮಗೆ ಬಹಳ ಆತುರವಿದೆ ಎಂದರು. ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ನಾನು ಬ್ಲಾಕ್ ಮೇಲ್ ಮಾಡುವ ವ್ಯಕ್ತಿಯಲ್ಲ. ನಾನು ಸೀದಾ ಸಾದ ವ್ಯಕ್ತಿ. ನಾನು ತಪ್ಪು ಮಾಡಿದ್ದರೆ ಆತ್ಮಾವಲೋಕನ ಮಾಡಿಕೊಳ್ಳುವವನು ನಾನು. ಸಚಿವ ಸ್ಥಾನಕ್ಕೆ ಬ್ಲಾಕ್ ಮೇಲ್ ಮಾಡಲ್ಲ. ಗುಂಪುಗಾರಿಕೆಯನ್ನೂ ನಾನು ಮಾಡಲ್ಲ ಎಂದು ಹೇಳಿದರು.
ಸರ್ಕಾರಕ್ಕೆ 105 ಜನನೂ ಮುಖ್ಯ, 17 ಮಂದಿಯೂ ಮುಖ್ಯ: ಎಂಟಿಬಿ ನಾಗರಾಜ್
ಸಿ.ಟಿ. ರವಿ ಕಚೇರಿ ಉದ್ಘಾಟನೆಗೆ ಆಹ್ವಾನವಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿ.ಟಿ.ರವಿ ಯುವ ಮೋರ್ಚಾ ಅಧ್ಯಕ್ಷರು. ಅವರು ನನ್ನ ಅತ್ಮೀಯ ಸ್ನೇಹಿತ. ನ.27 ರಂದು ನನಗೂ ಕರೆದಿದ್ದಾರೆ. ನಾವು ದೆಹಲಿಗೆ ಹೊರಟಿದ್ದೆವು. ಆದರೆ ನನ್ನ ಹುಟ್ಟೂರಿನಲ್ಲಿ ದುರ್ಗಮ್ಮನ ಕಾರ್ಯಕ್ರಮವಿದೆ. ದೇವಸ್ಥಾನದ ಉದ್ಘಾಟನೆಗೆ ನಾನು ಹೋಗಬೇಕಿದೆ. ಹಾಗಾಗಿ, ಸಿ.ಟಿ.ರವಿ ಕಚೇರಿ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ. ಈ ಬಗ್ಗೆ ಅವರಿಗೆ ನಾನು ತಿಳಿಸಿದ್ದೇನೆ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರಲ್ಲೇ ಒಳಜಗಳವಿತ್ತು. ಹಾಗಾಗಿ ಕಾಂಗ್ರೆಸ್ಗೆ ಹೀನಾಯವಾಗಿ ಸೋಲುಂಟಾಯಿತು. ಅವರ ತಟ್ಟೆಯಲ್ಲಿ ಏನಿದೆ ಅದನ್ನು ನೋಡಿಕೊಳ್ಳಲಿ ಎಂದು ರೇಣುಕಾಚಾರ್ಯ ಟಾಂಗ್ ನೀಡಿದರು.