ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿ ಶಾಸಕ ಎಂ.ಪಿ ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ಡಿ.ಎನ್. ಜೀವರಾಜ್ ಅವರು ನೇಮಕಗೊಂಡಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಇವರನ್ನು ನೇಮಿಸಿ, ಸಂಪುಟ ದರ್ಜೆಯ ಸಚಿವರ ಸ್ನಾನಮಾನದೊಂದಿಗೆ, ಸಂಪುಟ ದರ್ಜೆ ಸಚಿವರಿಗೆ ಅನ್ವಯಿಸುವ ಎಲ್ಲ ಸೌಲಭ್ಯಗಳನ್ನು ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಮಾಜಿ ಶಾಸಕ ಡಿ.ಎನ್.ಜೀವರಾಜ್ ಇಬ್ಬರೂ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲೂ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಇದೀಗ ಅವರನ್ನು ಮತ್ತೆ ನೇಮಕ ಮಾಡಲಾಗಿದೆ.
ಬಿಎಸ್ವೈ ಆಪ್ತರಿಗೆ ಹುದ್ದೆ:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರಮಾಪ್ತರೆಂದೇ ಕರೆಸಿಕೊಳ್ಳುವ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಯಡಿಯೂರಪ್ಪ ಸಂಪುಟದಲ್ಲಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಆದರೆ, ಯಡಿಯೂರಪ್ಪ ಅವರು, ರೇಣುಕಾಚಾರ್ಯ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡರು. ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲೂ ಸಚಿವ ಸ್ಥಾನ ಸಿಗದ ಕಾರಣ, ರೇಣುಕಾಚಾರ್ಯ ಅವರಿಗೆ ಮತ್ತೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಸಿಕ್ಕಿದೆ. ಕೋವಿಡ್ ಸಂದರ್ಭದಲ್ಲಿ ಹೊನ್ನಾಳಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿ ಜನಮನ್ನಣೆ ಗಳಿಸಿದ್ದರು.
ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಡಿ.ಎನ್. ಜೀವರಾಜ್ ಅವರಿಗೂ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಒಲಿದು ಬಂದಿದೆ. ಹಾಗಾಗಿ, ಯಡಿಯೂರಪ್ಪ ಅವರ ಹಿಡಿತ ಸರ್ಕಾರದ ಮೇಲೆ ಇನ್ನೂ ಇದೆ ಎಂದು ಹೇಳಲಾಗುತ್ತಿದೆ. ತಮ್ಮ ಆಪ್ತ ಬಳಗದ ಸದಸ್ಯರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ದಕ್ಕಿಸಿಕೊಳ್ಳುವಲ್ಲಿ ಬಿಎಸ್ವೈ ಯಶಸ್ವಿಯಾಗಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಜೀವರಾಜ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪರಮಾಪ್ತರಾಗಿರುವ ಕಾರಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಲಾಗಿತ್ತು. ಇದೀಗ ಮತ್ತೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲೂ ಜೀವರಾಜ್ ಅವರಿಗೆ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಬಿಜೆಪಿ ಮಂಡಲ ಅಧ್ಯಕ್ಷರಾಗಿ ರಾಜಕೀಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಜೀವರಾಜ್, ನಂತರ ಪಿಸಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದವರು. ಶೃಂಗೇರಿ ಕ್ಷೇತ್ರದಿಂದ ಒಟ್ಟಾರೆ ಆರು ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ಜಗದೀಶ್ ಶೆಟ್ಟರ್ ಅವರ ಮಂತ್ರಿಮಂಡಲದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರಾಗಿಯೂ ಕೆಲಸ ಮಾಡಿದ್ದರು.
ಇದನ್ನೂ ಓದಿ: ಮಂಡ್ಯ: ಪಿಯು ಕಾಲೇಜಿನ 28 ವಿದ್ಯಾರ್ಥಿನಿಯರಿಗೆ ತಗುಲಿದ ಕೋವಿಡ್ ಸೋಂಕು