ಮಾಹಿತಿ ಅಪ್ಲೋಡ್ ಮಾಡಿದ್ದ ರೈತರಿಗೆ ಸಾಲ ಮನ್ನಾ ಯೋಜನೆ ಪ್ರಯೋಜನ!? - ಬೆಂಗಳೂರು ಲೇಟೆಸ್ಟ್ ಸುದ್ದಿ
ಸಾಲ ಮನ್ನಾ ಯೋಜನೆಗೆ ಅರ್ಹರಾಗಿ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿದ್ದವರನ್ನು ಡಿಲೀಟ್ ಮಾಡಿಸಿದ್ದರಿಂದ ಸಮಸ್ಯೆ ಶುರುವಾಗಿದೆ. ಅಪ್ ಲೋಡ್ ಆಗಿದ್ದ ಎಲ್ಲ ಅರ್ಹರಿಗೂ ಸಾಲ ಮನ್ನಾ ಯೋಜನೆ ಪ್ರಯೋಜನ ದೊರೆಯುವಂತೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು..

ಬೆಂಗಳೂರು : ಸಾಲಮನ್ನಾ ಯೋಜನೆಯಡಿ ಅರ್ಹರಾಗಿ ಮಾಹಿತಿಯನ್ನು ಅಪ್‍ಲೋಡ್ ಮಾಡಿದ್ದ ರೈತರಿಗೂ ಸಾಲ ಮನ್ನಾ ಪ್ರಯೋಜನ ಸಿಗುವಂತೆ ಕ್ರಮ ಕೈಗೊಳ್ಳುವುದರ ಬಗ್ಗೆ ಪರಿಶೀಲನೆ ಮಾಡುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ದೊಡ್ಡಗೌಡರ ಮಹಾಂತೇಶ ಬಸವಂತರಾಯ ಅವರ ಪರವಾಗಿ ಹಾಲಪ್ಪ ಆಚಾರ್ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಆಗ ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಈಗಾಗಲೇ ಸಾಲ ಮನ್ನಾ ಯೋಜನೆಗೆ ಅರ್ಹರಾಗಿ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿದ್ದವರನ್ನು ಡಿಲೀಟ್ ಮಾಡಿಸಿದ್ದರಿಂದ ಸಮಸ್ಯೆ ಶುರುವಾಗಿದೆ. ಅಪ್‌ಲೋಡ್ ಆಗಿದ್ದ ಎಲ್ಲ ಅರ್ಹರಿಗೂ ಸಾಲ ಮನ್ನಾ ಯೋಜನೆ ಪ್ರಯೋಜನ ದೊರೆಯಲು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಸಲಹೆ ಮಾಡಿದರು.
ಇದಕ್ಕೆ ಸಮ್ಮತಿಸಿದ ಸಚಿವರು, ಬೆಳಗಾವಿ ಜಿಲ್ಲೆಯಲ್ಲಿ 2,65,690 ರೈತರ ಸಾಲಮನ್ನಾ ಮಾಡಲು ಗುರುತಿಸಲಾಗಿದ್ದು, 2,033 ರೈತರು ಬಾಕಿ ಉಳಿದಿದ್ದಾರೆ. ಈ ಪೈಕಿ 832 ರೈತರ ಸಾಲದ ಮತ್ತು ವೈಯಕ್ತಿಕ ಮಾಹಿತಿಯನ್ನು ತಂತ್ರಾಂಶದಲ್ಲಿ ಸರಿಪಡಿಸಲು ಅವಕಾಶ ಕಲ್ಪಿಸಲಾಗಿದೆ.
ಉಳಿದ 1,201 ರೈತರ ಆಧಾರ್ ಕಾರ್ಡ್, ಪಡಿತರ ಚೀಟಿ, ಆರ್ಟಿಸಿ ದಾಖಲೆಗಳು, ಸಂಬಂಧಪಟ್ಟ ಇಲಾಖೆಗಳ ದತ್ತಾಂಶದೊಂದಿಗೆ ರೈತರು ಪಡೆದ ಸಾಲದ ಮಾಹಿತಿ, ಸಹಕಾರ ಸಂಘಗಳ ದಾಖಲೆಗಳೊಂದಿಗೆ ತಾಳೆಯಾಗಿಲ್ಲ. ಸಂಘದ ಹಂತದಲ್ಲೇ ಸಮಸ್ಯೆ ಸರಿಪಡಿಸಲಾಗಿದ್ದು, ನಂತರ ಅರ್ಹ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದರು.
ಹೊಸ ಜನಗಣತಿ ಆಧಾರದ ಮೇಲೆ ಮೇಲ್ದರ್ಜೆಗೆ : ಕೇಂದ್ರ ಜನಗಣತಿ ನಿರ್ದೇಶನಾಲಯವು ಜ.1ರಿಂದ 2021ರ ಜನಗಣತಿಯನ್ನು ಆರಂಭಿಸಿದ್ದು, ಅದು ಮುಗಿದ ನಂತರ ಹೊಸ ಜನಗಣತಿ ಆಧಾರದ ಮೇಲೆ ಅರ್ಹವಿರುವ ಗ್ರಾಮ ಪಂಚಾಯತ್‌ನ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜು ಪರವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ವಿಧಾನಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಡಾ.ಕೆ.ಶ್ರೀನಿವಾಸ್ ಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಜನಗಣತಿ ನಿರ್ದೇಶನಾಲಯವು ಜನಗಣತಿ ಮುಗಿಯುವವರೆಗೂ ಯಾವುದೇ ಆಡಳಿತಾತ್ಮಕ ಗಡಿಗಳನ್ನು ಬದಲಾವಣೆ ಮಾಡದಂತೆ ಆದೇಶ ಹೊರಡಿಸಿದೆ. ಹೀಗಾಗಿ, ಗ್ರಾಮ ಪಂಚಾಯತ್‌ಗಳನ್ನು ಪಟ್ಟಣ ಪಂಚಾಯತ್‌ಗಳನ್ನಾಗಿ ಮೇಲ್ದರ್ಜೆಗೇರಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಮಧ್ಯಪ್ರವೇಶಿಸಿದ ಸ್ಪೀಕರ್, ಗ್ರಾಪಂ ಚುನಾವಣೆ ಬಹಿಷ್ಕರಿಸಿ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸುವ ಬೇಡಿಕೆಗಳು ರಾಜ್ಯದಲ್ಲಿವೆ. ಜನಸಂಖ್ಯೆಯೂ ಹೆಚ್ಚಳವಾಗಿದೆ. ಇದೆಲ್ಲವನ್ನು ಪರಿಗಣಿಸಿ ನಿಯಮಾನುಸಾರ ಮೇಲ್ದರ್ಜೆಗೇರಿಸಬೇಕೆಂದು ಸಲಹೆ ಮಾಡಿದರು.
ಆಗ ಸಚಿವ ಬೈರತಿ ಬಸವಾರಾಜು, ಕಾಲ ಕಾಲಕ್ಕೆ ಅರ್ಹ ಗ್ರಾಪಂಗಳನ್ನು ಪಟ್ಟಣ ಪಂಚಾಯತ್‌ಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಗ್ರಾಪಂ ಪಪಂ ಆಗಿ ಮೇಲ್ದರ್ಜೆಗೇರಿಸಿರುವ ಪ್ರಸ್ತಾವನೆ ಸ್ವೀಕೃತವಾಗಿಲ್ಲ. ಆದರೂ ಈ ವಿಚಾರದ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆಸಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಕೌಜಲಗಿ ಮಹಾಂತೇಶ್ ಶಿವಾನಂದ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡ ಗ್ರಾಪಂ 2011ರ ಜನಗಣತಿಯ ಪ್ರಕಾರ 12,125 ಜನಸಂಖ್ಯೆ ಹೊಂದಿದೆ. ಇಲ್ಲಿ ಪೊಲೀಸ್ ಠಾಣೆ, ಉಪನೋಂದಣಾಧಿಕಾರಿ ಕಚೇರಿ, ಉಪ ತಹಸೀಲ್ದಾರ್ ಕಚೇರಿಗಳಿವೆ. ಜಿಲ್ಲಾಧಿಕಾರಿಗಳಿಂದ ಮುರುಗೋಡ ಗ್ರಾಮ ಪಂಚಾಯತ್ ಪಪಂ ಆಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸ್ವೀಕೃತವಾಗಿದೆ ಎಂದು ಹೇಳಿದರು.