ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ, 2022-23ನೇ ಸಾಲಿನ ಆಗಸ್ಟ್ನಿಂದ ನವೆಂಬರ್ ಅವಧಿಯ ಕಂತಿನ ಸಹಾಯಧನದ ರೂಪದಲ್ಲಿ ರಾಜ್ಯದ 50.36 ಲಕ್ಷ ಅರ್ಹ ರೈತರಿಗೆ ಒಟ್ಟು 1007.26 ಕೋಟಿ ರೂ. ಮಂಜೂರಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಈ ಯೋಜನೆಯಡಿ 2018-19 ರಿಂದ 2022-23ರವರೆಗೆ ಕೇಂದ್ರ ಸರ್ಕಾರ 9968.57 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 4821.37 ಕೋಟಿ ರೂ. ಸಹಾಯಧನ ಪಾವತಿಸಿದ್ದು, 53.83 ಲಕ್ಷ ರೈತ ಕುಟುಂಬಗಳು ಪ್ರಯೋಜನ ಪಡೆದಿವೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ (ಒನ್ ಸ್ಟಾಪ್ ಒನ್ ಶಾಪ್)ದಲ್ಲಿ ರೈತರಿಗೆ ರಸಗೊಬ್ಬರ, ಕೀಟನಾಶಕಗಳ ಜತೆಗೆ ಅಗತ್ಯ ಸೇವೆಗಳು ಇನ್ನು ಮುಂದೆ ಲಭಿಸಲಿವೆ. ರೈತರಿಗೆ ಒಂದೇ ಸೂರಿನಡಿ ಈ ಸೌಕರ್ಯ ಒದಗಿಸಲೆಂದು ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾಮಟ್ಟದ ಚಿಲ್ಲರೆ ರಸಗೊಬ್ಬರ ಮಾರಾಟ ಮಳಿಗೆಗಳನ್ನು ಒನ್ ಸ್ಟಾಪ್, ಒನ್ ಶಾಪ್ ಗಳನ್ನಾಗಿ ಪರಿವರ್ತಿಸಲು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವಾಲಯ ತೀರ್ಮಾನಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಕೇಂದ್ರದಲ್ಲಿ ಉತ್ತಮ ಗುಣಮಟ್ಟದ ರಸಗೊಬ್ಬರ, ಕೀಟನಾಶಕಗಳು, ಬಿತ್ತನೆ ಬೀಜ, ಕೃಷಿ ಪರಿಕರ ಸಕಾಲದಲ್ಲಿ ಒದಗಿಸಲಾಗುತ್ತದೆ. ಅಲ್ಲದೆ, ರಸಗೊಬ್ಬರ, ಕೀಟನಾಶಕಗಳು, ಮಣ್ಣು ವಿಶ್ಲೇಷಣೆ, ಸಂಬಂಧಿಸಿದ ಇಲಾಖೆಗಳ, ಸುಧಾರಿತ ಬೇಸಾಯಕ್ರಮಗಳ ಮಾಹಿತಿ, ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳು ಲಭ್ಯವಾಗಲಿವೆ. ಮೊದಲ ಹಂತದಲ್ಲಿ ದೇಶಾದ್ಯಂತ 600 ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು ಕಾರ್ಯಾರಂಭಿಸಿದ್ದು, ಇದರಲ್ಲಿ ಕರ್ನಾಟಕದ 43 ಕೇಂದ್ರಗಳು ಸೇರಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈತರಿಗೆ ಇರುವ ಸರ್ಕಾರದ ಯೋಜನೆಗಳಿವು: ನೀವೂ ಉಪಯೋಗ ಪಡೆದುಕೊಳ್ಳಿ