ಬೆಂಗಳೂರು: ರಾಜ್ಯದ ಮಲೆನಾಡು ಹಾಗೂ ಕರಾವಳಿಯಲ್ಲಿ ಭಾರಿ ಮಳೆ ಮುಂದುವರೆದಿದ್ದು, ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆಯಾಗಿದ್ದು, ಮಳೆ ಪರಿಹಾರ ಕಾರ್ಯ ಕುರಿತಂತೆ ಮಧ್ಯಾಹ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 13 ಜಿಲ್ಲೆಗಳ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಮತ್ತು ಇತರೆ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.
ಇಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಹಾಗೂ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ನಾಳೆಯಿಂದ 3 ದಿನಗಳ ಕಾಲ ಯೆಲ್ಲೋ ಅಲರ್ಟ್ ಇರಲಿದೆ. ಬೆಳಗಾವಿ, ಕಲಬುರಗಿ ಮತ್ತು ಬೀದರ್‌ನಲ್ಲಿ ಮುಂದಿನ 72 ಗಂಟೆ ಯೆಲ್ಲೋ ಅಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಎಲ್ಲ ಶಾಲೆ ಕಾಲೇಜುಗಳಿಗೆ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಕಳಸ, ಎನ್.ಆರ್.ಪುರ, ಮೂಡಿಗೆರೆ ತಾಲೂಕುಗಳ ಶಾಲೆಗಳಿಗೆ ರಜೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕೂಡ ಕರಾವಳಿಯ ಎಲ್ಲ ತಾಲೂಕುಗಳು ಹಾಗೂ ಮಲೆನಾಡು ಭಾಗದ ಸಿದ್ದಾಪುರ, ಶಿರಸಿ ಮತ್ತು ಜೋಯಿಡಾ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಿಸಲಾಗಿದೆ.
ವಾಡಿಕೆಗಿಂತ ಅಧಿಕ ಮಳೆ: ರಾಜ್ಯದಲ್ಲಿ ಜೂನ್ ತಿಂಗಳು ಮಳೆ ಕೊರತೆ ಎದುರಾಗಿತ್ತು. ಆದರೆ ಜುಲೈನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. ಇಲ್ಲಿಯವರೆಗೆ ವಾಡಿಕೆಯಂತೆ 58 ಮಿಮೀ ಮಳೆ ಆಗಬೇಕಿತ್ತು. ಜುಲೈ 7ರವರೆಗೆ 112 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ.94ಕ್ಕೂ ಹೆಚ್ಚು ಮಳೆಯಾದಂತಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಿಎಂ ಸಭೆ: ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ ಸಭೆ ಕರೆಯಲಾಗಿದ್ದು, ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆಯಾಗಿದೆ? ಎಷ್ಟು ಹಾನಿಯಾಗಿದೆ? ಈಗಾಗಲೇ ಕೈಗೊಳ್ಳಲಾಗಿರುವ ತುರ್ತು ಕ್ರಮಗಳೇನು ಎಂಬುದರ ಕುರಿತು ಸಿಎಂ ಮಾಹಿತಿ ಪಡೆದು ಸೂಕ್ತ ನಿರ್ದೇಶನ ನೀಡಲಿದ್ದಾರೆ. ಅತಿ ಹೆಚ್ಚು ಮಳೆ ಆಗಿರುವ 13 ಜಿಲ್ಲೆಗಳ ಡಿಸಿ ಮತ್ತು ಸಿಇಒಗಳ ಜೊತೆ ಸಿಎಂ ಸಭೆ ನಡೆಸುವರು. ಸಭೆಯಲ್ಲಿ ಭಾಗವಹಿಸಲಿರುವ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ, ಗೃಹ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಭಾರಿ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು