ಬೆಂಗಳೂರು: ಪಿಯುಸಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಮುಗಿದಿದ್ದು, ನೇಮಕಾತಿ ಪತ್ರ ದೊರೆಯದ ಹಿನ್ನೆಲೆ ಪಿಯು ಬೋರ್ಡ್ ಎದುರು ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹಿನ್ನೆಲೆ ಇದಕ್ಕೆ ಸಾಮಾಜಿಕ ಜಾಲತಾಣದಲ್ಲೇ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಪಿಯು ಉಪನ್ಯಾಸಕರಾಗಿ ಆಯ್ಕೆಗೊಂಡಿರುವ ಮತ್ತು ಕೌನ್ಸೆಲಿಂಗ್ ಸಹ ಪೂರ್ಣವಾಗಿರುವ ಉಪನ್ಯಾಸಕರು ನೇಮಕಾತಿ ಆದೇಶಕ್ಕಾಗಿ ಧರಣಿ ಕೂತಿರುವ ವಿಚಾರ ತಿಳಿದು ಬಂದಿದೆ. ಆರ್ಥಿಕ ಇಲಾಖೆಯ ನಿರ್ಬಂಧ ಇದ್ದರೂ ಸಹ ಇವರೆಲ್ಲರಿಗೂ ಕೌನ್ಸೆಲಿಂಗ್ ಪ್ರಕ್ರಿಯೆ ಸಹ ಪೂರ್ಣಗೊಳಿಸಲಾಗಿದೆ.
ಕಾಲೇಜುಗಳು ಪ್ರಾರಂಭವಾದ ತಕ್ಷಣ ನೇಮಕಾತಿ ಆದೇಶ ಕೊಡಲಾಗುವುದು ಎಂದು ಮುಂಚೆಯೇ ತಿಳಿಸಲಾಗಿತ್ತು. ಉಪನ್ಯಾಸಕರಾಗಿ ಆಯ್ಕೆಯಾಗಿ ಒಂದು ವರ್ಷದ ಒಳಗೆ ನೇಮಕಾತಿ ಆದೇಶ ದೊರೆಯದಿದ್ದರೆ ಆ ಆಯ್ಕೆ ಪಟ್ಟಿ ರದ್ದಾಗುತ್ತದೆ ಎಂಬ ಆತಂಕ ಈ ನೂತನ ಉಪನ್ಯಾಸಕರಿಗೆ ಇದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಉಪನ್ಯಾಸಕರ ಹುದ್ದೆಗಳಿಗೆ ತೊಂದರೆಯಾಗದಂತೆ ಅಗತ್ಯ ತಿದ್ದುಪಡಿ ಬೇಕಾದರೆ ಮಾಡಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಇದೇ ವಿಷಯವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಟ್ವೀಟ್ ಮೂಲಕ ತಿಳಿಸಿದ್ದರು. ಜೊತೆಗೆ ಆಹೋರಾತ್ರಿ ಮುಂದುವರೆದ ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಿಕ್ಷಣ ಸಚಿವ ಬಸವರಾಜ್ ಹೊರಟ್ಟಿ ಭೇಟಿ ನೀಡಿ ಸಮಸ್ಯೆ ಆಲಿಸಿದ್ದರು.