ಬೆಂಗಳೂರು: ಆರ್.ಆರ್ ನಗರ ಉಪ ಚುನಾವಣೆ ಹಿನ್ನೆಲೆ ನಗರದ ಉತ್ತರ ವಿಭಾಗದಲ್ಲಿ ಹೆಚ್ವುವರಿ ಪೊಲೀಸರನ್ನ ನೇಮಕ ಮಾಡಲಾಗಿದೆ. ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಹಾಗೂ ಕೆಲ ಪ್ರಕರಣಗಳು ದಾಖಲಾಗಿರುವ ಕಾರಣ ನಗರಾಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್, ಉತ್ತರ ವಿಭಾಗ ಧರ್ಮೆಂದ್ರ ಕುಮಾರ್ ಮೀನಾ, ಗುಪ್ತಚರ ಇಲಾಖೆ ಅಶ್ವಿನಿ ಭಾಗಿಯಾಗಿದ್ದು, ಬರುವ ಒಂದು ವಾರಗಳ ಕಾಲ ಯಾವ ರೀತಿ ಭದ್ರತೆ ಮಾಡಬೇಕು ಎಂಬುದರ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದಾರೆ. ಹಾಗೆಯೇ ಉತ್ತರ ವಿಭಾಗದಲ್ಲೂ ಪ್ರಚಾರ ನಡೆಯುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 10 ಪೊಲೀಸ್ ಇನ್ಸ್ಪೆಕ್ಟರ್, 36 ಸಬ್ ಇನ್ಸ್ ಪೆಕ್ಟರ್, 200 ಹೆಡ್ ಕಾನ್ಸ್ಟೇಬಲ್, 4 ಕೆಎಸ್ಆರ್ಪಿ ತುಕಡಿ 3 ಸಿಆರ್ ನೇಮಕ ಮಾಡಲಾಗಿದೆ. ಅಭ್ಯರ್ಥಿಗಳು ಪ್ರಚಾರ ಮಾಡುವ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಕ್ಷೇತ್ರದಲ್ಲಿ ಚುನಾವಣಾ ಆಯೋಗ ಎಲ್ಲ ಪೂರಕ ಕ್ರಮಗಳನ್ನ ಕೈಗೊಂಡಿದೆ.
ಈ ಬಗ್ಗೆ ಉತ್ತರ ವಿಭಾಗ ಡಿಸಿಪಿ ಧರ್ಮೆಂದ್ರ ಕುಮಾರ್ ಮೀನಾ ಮಾತನಾಡಿ, ಎಲೆಕ್ಷನ್ ಹಿನ್ನೆಲೆ ಹೆಚ್ಚಿನ ಭದ್ರತೆ ಮಾಡಲಾಗಿದೆ. ಎಲ್ಲೆಡೆ ಹೆಚ್ಚು ಸಿಬ್ಬಂದಿ ನಿಯೋಜನೆಯಾಗಿದ್ದು ನಾವು ಎಲ್ಲೆಡೆ ಕಣ್ಗಾವಲು ಹಾಕಿದ್ದೇವೆ ಎಂದು ತಿಳಿಸಿದ್ದಾರೆ.