ಬೆಂಗಳೂರು: ಕಳೆದ 5 ವರ್ಷಗಳ ಬಳಿಕ ಮತ್ತೆ ಸಿಲಿಕಾನ್ ಸಿಟಿಯಲ್ಲಿ ದಾಖಲೆಯ ಮಳೆ ಬಿದ್ದಿದೆ. ಈ ಹಿಂದೆ 2017ರಲ್ಲಿ 170 ಮಿ. ಮೀ. ಮಳೆಯಾಗುವ ಮೂಲಕ ದಾಖಲೆ ಸೃಷ್ಟಿಯಾಗಿತ್ತು. ಇದೀಗ 5 ವರ್ಷದ ಬಳಿಕ ಮತ್ತೆ ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆಯಾಗಿದ್ದು, ಈ ವರ್ಷ ಇಲ್ಲಿಯವರೆಗೆ 166 ಮಿ. ಮೀ ಮಳೆಯಾಗಿದೆ.
2011ರಲ್ಲಿ 110 ಮಿ. ಮೀ ಮಳೆ ಸುರಿದು ದಾಖಲೆ ಬರೆದಿತ್ತು. ಆದರೆ ನಿನ್ನೆ ಒಂದೇ ದಿನ 11 ಮಿ. ಮೀ ಮಳೆ ಸುರಿದಿದೆ. ಮುಂದಿನ 5 ದಿನ ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ. ಈ ನಿಟ್ಟಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಇಂದು ನಾಳೆ ಮಳೆ ಸುರಿದರೆ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗುವ ಸಾಧ್ಯತೆ ಇದೆ.
ಬಿಡುವು ನೀಡದೆ ದಿನವೂ ನಿರಂತರವಾಗಿ ರಾಜಧಾನಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ನಗರದ ಬಹುತೇಕ ಕಡೆ ರಸ್ತೆ ಗುಂಡಿಗಳಲ್ಲಿ ಬೀಳುವ ಆತಂಕದಿಂದ ವಾಹನ ಸವಾರರು ತೆರಳಬೇಕಾಗಿದೆ. ಕೆಲವೆಡೆ ರಸ್ತೆ ಸಂಪರ್ಕ ಕಟ್ ಆಗಿದ್ದು, ವಾಹನಗಳು ಸರಾಗವಾಗಿ ಹೋಗಲು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ.
ಉರುಳಿ ಬಿದ್ದ ತಡೆಗೋಡೆ: ಪ್ರಮುಖವಾಗಿ ಶನಿವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಅರಮನೆ ರಸ್ತೆಯ ಸಿಐಡಿ ಕಚೇರಿಯ ತಡೆಗೋಡೆ ಉರುಳಿ ಬಿದ್ದಿದೆ. ಮತ್ತೊಂದೆಡೆ ಸ್ಯಾಂಕಿ ಟ್ಯಾಂಕ್ ಮುಖ್ಯ ರಸ್ತೆಯಲ್ಲಿ ಬೃಹತ್ ಗುಂಡಿ ಕಂಡುಬಂದಿದ್ದು, ವಾಹನ ಸವಾರರಲ್ಲಿ ಆತಂಕ ದ್ವಿಗುಣಗೊಂಡಿದೆ.
ವಾಹನ ಸವಾರರು ಪರದಾಡುವ ಸ್ಥಿತಿ: ಕಾರ್ಪೊರೇಷನ್, ಶಾಂತಿನಗರ, ಡಬಲ್ ರೋಡ್, ಎಂ. ಜಿ ರಸ್ತೆ, ಕೆ. ಆರ್ ಮಾರ್ಕೆಟ್, ಮೈಸೂರು ರಸ್ತೆ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿತ್ತು. ಶಾಂತಿನಗರದ ಜೋಡಿ ರಸ್ತೆಗಳು ಸಂಪೂರ್ಣ ಜಲಾವೃತವಾಗಿ, ಝರಿಯಂತೆ ಹರಿಯುತ್ತಿರುವ ನೀರಿನಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಓದಿ: ರಾಜ್ಯದ 21 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ: ಆರೆಂಜ್, ಯಲ್ಲೋ ಅಲರ್ಟ್ ಘೋಷಣೆ