ಬೆಂಗಳೂರು: ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ ರೆಬಲ್ ಶಾಸಕರು ಸ್ಪೀಕರ್ ಭೇಟಿಯ ಬಳಿಕ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ವಾಪಾಸಾಗಿ ಅಲ್ಲಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.
ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು ಸಂಜೆ 6 ಗಂಟೆಗೆ ಓಡೋಡಿ ಬಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಎರಡನೇ ಬಾರಿ ರಾಜೀನಾಮೆ ಪತ್ರ ಸಲ್ಲಿಸಿದರು. ಬಳಿಕ ಬಸ್ನಲ್ಲಿ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ವಿಶೇಷ ವಿಮಾನದ ಮೂಲಕ ಮುಂಬೈಗೆ ವಾಪಸಾಗಿದ್ದಾರೆ.
ಶಾಸಕ ರಮೇಶ್ ಜಾರಕಿಹೊಳಿ ಖಾಸಗಿ ಕಾರಿನಲ್ಲಿ ವಿಮಾನ ನಿಲ್ದಾಣ ಪ್ರವೇಶಿಸಿದ್ರೆ, ಇನ್ನು ಉಳಿದ ಶಾಸಕರು ಮಿನಿ ಬಸ್ ಮೂಲಕ ವಿಮಾನ ನಿಲ್ದಾಣ ತಲುಪಿದ್ದರು. ಎರಡು ತಂಡಗಳಾಗಿ ಮುಂಬಯಿಗೆ ಪ್ರಯಾಣ ಬೆಳೆಸಿದ್ದಾರೆ.
ಮೊದಲಿಗೆ ಭೈರತಿ ಬಸವರಾಜ್, ಮಹೇಶ್ ಕುಮಟಹಳ್ಳಿ, ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ಒಳಗೊಂಡ ಒಂದು ತಂಡ ರಾತ್ರಿ 8 ಗಂಟೆಗೆ ಹೊರಟಿತು. ನಂತರ 11 ಗಂಟೆಗೆ ಮತ್ತೊಂದು ಅತೃಪ್ತರ ತಂಡ ಮುಂಬೈಗೆ ಹೊರಟಿದೆ. ವಿಶ್ವನಾಥ್, ಗೋಪಾಲಯ್ಯ, ರಮೇಶ್ ಜಾರಕಿಹೊಳಿ, ಪ್ರತಾಪ್ ಗೌಡ ಪಾಟೀಲ್ ಎರಡನೇ ತಂಡದಲ್ಲಿದ್ದ ಶಾಸಕರು.
ವಿಮಾನ ನಿಲ್ದಾಣದಲ್ಲೇ ಊಟ ಸೇವಿಸಿ, ವಾಕಿಂಗ್ ಮಾಡಿ ವಿಶ್ರಾಂತಿ ಪಡೆದು 2ನೇ ತಂಡ ಮಂಬೈಗೆ ಹಾರಿದೆ. ಅಲ್ಲದೆ ಸರಿಯಾದ ಸಮಯಕ್ಕೆ ವಿಮಾನವನ್ನು ಬುಕ್ ಮಾಡದ ಬಿಎಸ್ವೈ ಪಿಎ ಸಂತೋಷ್ನನ್ನು ಶಾಸಕ ವಿಶ್ವನಾಥ್ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.