ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಆಡಳಿತಾರೂಢ ಬಿಜೆಪಿ ಹೀನಾಯ ಸೋಲಿನ ಸುಳಿಗೆ ಸಿಲುಕಿದ್ದು, ಕಾಂಗ್ರೆಸ್ ಸರಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದೆ. ಹಾಗಾದರೆ, ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣಗಳೇನು ನೋಡೋಣ.
ಐದು ಪ್ರಮುಖ ಗ್ಯಾರೆಂಟಿಗಳು: ಕಾಂಗ್ರೆಸ್ ಉಚಿತ ಘೋಷಣೆಗಳ ತಂತ್ರಗಾರಿಕೆಯನ್ನು ಕೆಲವು ಸಮಯದಿಂದ ಚುರುಕುಗೊಳಿಸುತ್ತಿದೆ. ಕರ್ನಾಟಕ ಚುನಾವಣೆಯಲ್ಲೂ ಕಾಂಗ್ರೆಸ್ ಅದನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡು ಐದು ಪ್ರಮುಖ ಗ್ಯಾರೆಂಟಿಗಳನ್ನು ಜನತೆಯ ಮುಂದಿಟ್ಟಿತ್ತು. ಪ್ರತಿ ಕುಟುಂಬದ ಮಹಿಳಾ ಜಯಮಾನಿಗೆ ಪ್ರತಿ 2,000 ರೂ.ಗಳ ಹಾಗೂ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪಾಸ್, ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ರೂ. ಹಾಗೂ ಡಿಪ್ಲೊಮಾ ಹೊಂದಿರುವವರಿಗೆ 1,500 ರೂಪಾಯಿ ಭತ್ಯೆ, 10 ಕಿಲೋ ಉಚಿತ ಅಕ್ಕಿ ಹಾಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದು ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು.
ಅಲ್ಲದೇ, ಸಮುದ್ರದಲ್ಲಿ ಮೀನುಗಾರಿಕೆಗೆ ಪ್ರತಿ ವರ್ಷ 500 ಲೀಟರ್ವರೆಗೆ ತೆರಿಗೆ ಮುಕ್ತ ಡೀಸೆಲ್ ಮತ್ತು ಮೀನುಗಾರಿಕೆ ರಜೆಯ ಸಮಯದಲ್ಲಿ ಭತ್ಯೆಯಾಗಿ ಎಲ್ಲ ಮೀನುಗಾರರಿಗೆ 6,000 ರೂ. ನೀಡುವುದಾಗಿಯೂ ಭರವಸೆ ನೀಡಿತ್ತು. ಪ್ರತಿ ಕೆಜಿಗೆ 3 ರೂ.ಗೆ ಹಸುವಿನ ಸಗಣಿ ಖರೀದಿಸಿ ಹಳ್ಳಿಗಳಲ್ಲಿ ಕಾಂಪೋಸ್ಟ್, ಗೊಬ್ಬರ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಹೇಳಿತ್ತು.
ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಉಚಿತ ಘೋಷಣೆಗಳನ್ನು "ರೆವ್ಡಿ" ಸಂಸ್ಕೃತಿ ಎಂದು ಕರೆದಿದ್ದರು. ಇದು ಆರ್ಥಿಕತೆಗೆ ಒಳ್ಳೆಯದಲ್ಲ ಎಂದು ಹೇಳಿದ್ದರು. ಆದರೆ, ಉಚಿತ ಕೊಡುಗೆಗಳನ್ನು ಅತಿಯಾಗಿ ನೆಚ್ಚಿಕೊಂಡಿದ್ದರು. ವಿಶೇಷವಾಗಿ ಪಂಜಾಬ್ ಆಮ್ ಆದ್ಮಿ ಪಕ್ಷ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಜನರಿಗೆ ಹಲವು ಉಚಿತ ಕೊಡುಗೆಗಳನ್ನು ನೀಡಿದ್ದವು. ಅದೇ ರೀತಿಯಾಗಿ ಕರ್ನಾಟಕದಲ್ಲೂ ಕಾಂಗ್ರೆಸ್ ಉಚಿತ ಭರವಸೆ ನೀಡಿತ್ತು. ಇದು ಪಕ್ಷದ ಕೈ ಹಿಡಿದಿರುವ ಸಾಧ್ಯತೆಯೂ ಇದೆ.
ಲಿಂಗಾಯತ ನಾಯಕರಿಗೆ ಅಪಮಾನದ ಅಸ್ತ್ರ: ಈ ಹಿಂದೆ ತಲಾ 20 ತಿಂಗಳ ಅಧಿಕಾರ ಹಂಚಿಕೆ ಸೂತ್ರದ ಆಧಾರದ ಮೇಲೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗಿತ್ತು. ಆದರೆ, ಹೆಚ್ಡಿ ಕುಮಾರಸ್ವಾಮಿ ಅವರು ಬಿ.ಎಸ್.ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡಲು ನಿರಾಕರಿಸಿದ್ದರು. ಇದು ಯಡಿಯೂರಪ್ಪನವರ ಬೆಂಬಲಿಗರಿಗೆ ಅದರಲ್ಲೂ ವೀರಶೈವ ಲಿಂಗಾಯತರಿಗೆ ಭಾರಿ ನೋವುಂಟು ಮಾಡಿತ್ತು. ಅಂತೆಯೇ, ಮುಂದಿನ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರ ಬೆನ್ನಿಗೆ ಇಡೀ ಸಮುದಾಯ ನಿಂತಿತ್ತು. ಇದು ಮೊದಲ ಬಾರಿಗೆ ಅಧಿಕಾರ ಬಿಜೆಪಿಕ್ಕೆ ಬರಲು ಕಾರಣವಾಗಿತ್ತು.
ಅದೇ ರೀತಿಯಾಗಿ ಈ ಬಾರಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನದ ನಂತರ ಯಡಿಯೂರಪ್ಪ ಅಧಿಕಾರಕ್ಕೆ ಏರಿದ್ದರು. ಆದರೆ, ಎರಡು ವರ್ಷಗಳ ಬಳಿಕ ಅವರನ್ನು ಸಿಎಂ ಸ್ಥಾನದಿಂದ ಬಿಜೆಪಿ ಕೆಳಗೆ ಇಳಿಸಿತ್ತು. ಅಲ್ಲದೇ, ಬಿಜೆಪಿಯ ಮೂರು ಪ್ರಮುಖ ಲಿಂಗಾಯತ ನಾಯಕರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಕೊಪ್ಪಳ ಸಂಸದ ಕರಡಿ ಸಂಗಣ್ಣ ಬಿಜೆಪಿ ಟಿಕೆಟ್ ನಿರಾಕರಣೆ ಮಾಡಿತ್ತು. ಇದು ಪಕ್ಷದ ಬಗ್ಗೆ ನಕಾರಾತ್ಮಕ ಸಂದೇಶ ರವಾನಿಸುವಂತೆ ಆಗಿತು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಕಾಂಗ್ರೆಸ್ ರಾಜ್ಯ ಲಿಂಗಾಯತ ನಾಯಕರನ್ನು ಬಿಜೆಪಿ ವರಿಷ್ಠರು ಅವಮಾನಿಸುತ್ತಿದ್ದಾರೆ ಎಂದು ಬಿಂಬಿಸಲು ಆರಂಭಿಸಿತ್ತು. ಮತ್ತೊಂದೆಡೆ, ಕಾಂಗ್ರೆಸ್ ಲಿಂಗಾಯತ ಸಮುದಾಯದ ನಾಯಕರಾದ ಎಂ.ಬಿ.ಪಾಟೀಲ್ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿ ಸಮುದಾಯದ ಮತಗಳನ್ನು ಸೆಳೆಯುವ ಪಯತ್ನ ಮಾಡಿತ್ತು.
ಮುಸ್ಲಿಂ ಕೋಟಾ ರದ್ದು ವಿವಾದ: ಬೊಮ್ಮಾಯಿ ನೇತೃತ್ವದ ಸರ್ಕಾರ ಕೈಗೊಂಡ ಮುಸ್ಲಿಂ ಮೀಸಲಾತಿ ಕೋಟಾ ರದ್ದು ನಿರ್ಧಾರವು ಮತದಾರರನ್ನು ಧ್ರುವೀಕರಿಸಿರುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ತೆಗೆದುಹಾಕಿದ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಅಲ್ಲದೇ, ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತ ಸಮುದಾಯದ ಕೋಟಾವನ್ನು ಮರುಸ್ಥಾಪಿಸುವುದಾಗಿ ಘೋಷಿಸಿತ್ತು.
ಹಳೆಯ ಪಿಂಚಣಿ ಯೋಜನೆ: ಹಳೆಯ ಪಿಂಚಣಿ ಯೋಜನೆ (ಒಪಿಎಸ್) ರದ್ದು ನಿರ್ಧಾರ ಸಹ ಪ್ರಮುಖ ರಾಜಕೀಯ ವಿಷಯವಾಗಿ ಮಾರ್ಪಟ್ಟಿದೆ. ಬಿಜೆಪಿಯೇತರ ಸರ್ಕಾರಗಳು ಹೊಸ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ ಹಳೆಯ ಪಿಂಚಣಿ ಯೋಜನೆ ಮರು ಜಾರಿ ಮಾಡುವ ಮುಂದಾಗಿದೆ. ಕರ್ನಾಟಕದಲ್ಲಿ ಒಟ್ಟು 9 ಲಕ್ಷ ಸರ್ಕಾರಿ ನೌಕರರ ಪೈಕಿ ಅಂದಾಜು 3 ಲಕ್ಷ ಜನರು ಎನ್‌ಪಿಎಸ್ ವ್ಯಾಪ್ತಿಗೆ ಒಳಪಡುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎನ್ಪಿಸಿ ರದ್ದು ಮಾಡಿ ಒಪಿಎಸ್ ಜಾರಿ ಮಾಡುವುದಾಗಿ ಭರವಸೆ ನೀಡಿತ್ತು.
ಬಜರಂಗ ದಳದ ವಿಷಯ ಯುಟರ್ನ್: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧ ಮಾಡುವ ಪ್ರಸ್ತಾಪ ವಿಷಯ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಪ್ರಧಾನಿ ಮೋದಿ ಖುದ್ದು ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ಈ ವಿಷಯದ ಮೇಲೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಲು ಆರಂಭಿಸಿದ್ದರು. ಇದು ಕೆಟ್ಟ ಪರಿಣಾಮ ಬೀರಲಿದೆ ಎಂಬುವುದನ್ನು ಅರಿತಕೊಂಡು ಕಾಂಗ್ರೆಸ್ ಬಜರಂಗ ದಳದ ವಿಷಯ ಯುಟರ್ನ್ ಪಡೆಯಿತು. ಬಜರಂಗದಳವನ್ನು ನಿಷೇಧಿಸುವುದಿಲ್ಲ ಎಂದು ಹಿರಿಯ ನಾಯಕ ವೀರಪ್ಪ ಮೊಯ್ಲಿ ಹೇಳಿಕೆ ನೀಡಿದರು. ಅಲ್ಲದೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹನುಮಾನ್ ಮಂದಿರ ನಿರ್ಮಿಸಲಿದೆ ಎಂದು ಪ್ರಕಟಿಸಿದರು. ಈ ಮೂಲಕ ಬಜರಂಗ ದಳ ವಿಷಯವನ್ನು ಕಾಂಗ್ರೆಸ್ ತಿಳಿಗೊಳಿಸುವ ಪ್ರಯತ್ನವನ್ನು ಮಾಡಿತು.
ಭ್ರಷ್ಟಾಚಾರದ ಅಸ್ತ್ರ: ಆಡಳಿತಾರೂಢ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಅಸ್ತ್ರವನ್ನು ಕಾಂಗ್ರೆಸ್ ಪರಿಣಾಮಕಾರಿಯಾಗಿ ಬೀಸಿತ್ತು. ಇದೊಂದು ಭ್ರಷ್ಟಾಚಾರ ಸರ್ಕಾರ, ಶೇ.40ರಷ್ಟು ಕಮಿಷನ್ ಸರ್ಕಾರ ಎಂದು ಜರಿಯಲು ಶುರು ಮಾಡಿತ್ತು. ಬಿಜೆಪಿಯ ಆಡಳಿತದ ವಿವಿಧ ಹಗರಣಗಳನ್ನು ಚಿತ್ರಿಸುವ ಭ್ರಷ್ಟಾಚಾರ ರೇಟ್ ಕಾರ್ಡ್ಅನ್ನು ಬಿಡುಗಡೆ ಮಾಡಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ 1,50,000 ಕೋಟಿ ರೂಪಾಯಿ ಲೂಟಿ ಮಾಡಿದೆ ಎಂದು ಆರೋಪಿಸಿತ್ತು.
ಇದನ್ನೂ ಓದಿ: 'ದ್ವೇಷದ ಬಜಾರ್ ಬಂದ್, ಪ್ರೀತಿಯ ಅಂಗಡಿ ಆರಂಭ': ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ ಖುಷ್