ಬೆಂಗಳೂರು: ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೂ ಮೀಸಲಾತಿ ಜಾರಿಗೆ ತಂದು ಎರಡು ವರ್ಷ ಸಮೀಪಿಸುತ್ತಿದೆ. ಆದರೆ ರಾಜ್ಯದಲ್ಲಿ ಇನ್ನೂ ಸಾಮಾನ್ಯ ವರ್ಗಕ್ಕಾಗಿನ ಮೀಸಲಾತಿ ಕಾರ್ಯರೂಪಕ್ಕೆ ಬಂದಿಲ್ಲ. ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಮೀಸಲಾತಿ ಜಾರಿ ಸದ್ಯ ಯಾವ ಹಂತದಲ್ಲಿದೆ, ವಿಳಂಬಕ್ಕೆ ಕಾರಣ ಏನು ಎಂಬ ವರದಿ ಇಲ್ಲಿದೆ.
ಕೇಂದ್ರ ಸರ್ಕಾರ ಜನವರಿ 2019ರಲ್ಲಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗಕ್ಕೂ 10% ಮೀಸಲಾತಿ ಜಾರಿಗೊಳಿಸಿತ್ತು. ಸಾಮಾನ್ಯ ವರ್ಗಕ್ಕೆ ಸೇರಿದ ವಾರ್ಷಿಕ 8 ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯ ಹೊಂದಿರುವವರಿಗೆ ಅನ್ವಯವಾಗುವಂತೆ ಮೀಸಲು ಸೌಲಭ್ಯ ಕಲ್ಪಿಸಲಾಗಿದೆ. ಐದು ಎಕರೆಗಿಂತ ಕಡಿಮೆ ಕೃಷಿ ಭೂಮಿ, ಸಾವಿರ ಚದರ ಅಡಿಗಿಂತ ಕಡಿಮೆ ಅಳತೆಯ ಮನೆ, 100 ಯಾರ್ಡ್‌ಗಿಂತ ಕಡಿಮೆ ಅಳತೆಯ ವಸತಿ ನಿವೇಶನ ಹೊಂದಿದವರು ಈ ಮೀಸಲಾತಿ ಪಡೆಯಬಹುದು. ಇದು ಮೋದಿ ಸರ್ಕಾರದ ಮಹತ್ವದ ಘೋಷಣೆಯಾಗಿತ್ತು.
ಇದೀಗ ಈ ಮೀಸಲಾತಿ ಘೋಷಣೆಯಾಗಿ ಬಹುತೇಕ ಎರಡು ವರ್ಷ ಆಗುತ್ತಾ ಬಂದಿದೆ. ಆದರೆ ಕರ್ನಾಟಕದಲ್ಲಿ ಈ ಮೀಸಲಾತಿ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಈಗಾಗಲೇ ನೆರೆ ರಾಜ್ಯಗಳು ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗ (ಇಡಬ್ಲ್ಯುಎಸ್) ಮೀಸಲಾತಿಯನ್ನು ರಾಜ್ಯ ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಜಾರೊಗೆ ತಂದಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಮೀಸಲಾತಿಯನ್ನು ಜಾರಿಗೆ ತರಲು ಸರ್ಕಾರ ಮೀನಾಮೇಷ ನೋಡುತ್ತಿದೆ.
ಈಗಾಗಲೇ ಎಸ್ಟಿ ಸಮುದಾಯ ಮೀಸಲಾತಿ ಮಿತಿ 7.5% ಹೆಚ್ಚಿಸಲು ಒತ್ತಡ ಹೇರುತ್ತಿದ್ದು, ಎಸ್ಸಿ ಸಮುದಾಯವೂ ಸದಾಶಿವ ಆಯೋಗದ ಶಿಫಾರಸ್ಸಿನಂತೆ ಮೀಸಲಾತಿ ಮಿತಿಯನ್ನು 17%ಗೆ ಹೆಚ್ಚಿಸಲು ಒತ್ತಡ ಹೇರುತ್ತಿದೆ. ಈ ಮಧ್ಯೆ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಮೀಸಲಾತಿ ಜಾರಿ ಬಗ್ಗೆನೂ ಬಲವಾಗಿ ಕೂಗು ಕೇಳಿ ಬರುತ್ತಿದೆ.
ಇಡಬ್ಲ್ಯುಎಸ್ ಮೀಸಲಾತಿ ಜಾರಿಯ ಸ್ಥಿತಿಗತಿ ಹೇಗಿದೆ?: ರಾಜ್ಯದಲ್ಲಿ ಎರಡು ವರ್ಷ ಸಮೀಪಿಸುತ್ತಿದ್ದರೂ ಇಡಬ್ಲ್ಯುಎಸ್ ಮೀಸಲಾತಿ ಜಾರಿಗೆ ತರಲು ಸಾಧ್ಯವಾಗಿಲ್ಲ. ಸಿಎಂ ಯಡಿಯೂರಪ್ಪರಿಗೆ ಮೀಸಲಾತಿಯನ್ನು ಜಾರಿಗೆ ತರುವ ಇರಾದೆ ಇದೆ. ಆದರೆ ಕೆಲ ರಾಜಕೀಯ ಒತ್ತಡದಿಂದ ಮೀಸಲಾತಿ ಜಾರಿ ಸಾಧ್ಯವಾಗುತ್ತಿಲ್ಲ. ಈಗಾಗಲೇ ಸಾಮಾನ್ಯ ವರ್ಗದವರಿಗೆ ಆದಾಯ ಪ್ರಮಾಣಪತ್ರ ನೀಡಲು ಸರ್ಕಾರ ತಹಶೀಲ್ದಾರರಿಗೆ ಸೂಚನೆ ನೀಡಿದೆ. ಇತ್ತ ಮೀಸಲಾತಿಗಾಗಿನ ಕರಡು ಮಾರ್ಗಸೂಚಿ ಸಿದ್ಧವಾಗಿದೆ. ಸಂಪುಟ ಸಭೆಯಲ್ಲಿ ಚರ್ಚೆಯಾದ ಬಳಿಕ ಮೀಸಲಾತಿ ಜಾರಿಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ತಿಳಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಕರಡು ವರದಿಯನ್ನು ಸಲ್ಲಿಕೆ ಮಾಡಿದೆ. ಇತ್ತ ಸಿಎಂ ಮೀಸಲಾತಿ ಸಂಬಂಧ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆಯನ್ನೂ ನಡೆಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗನೂ ಮೀಸಲಾತಿ ರೂಪುರೇಷೆ ಬಗ್ಗೆ ಅವಲೋಕನ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಕರಡು ವರದಿ ಸಿಎಂ ಕಚೇರಿಯಲ್ಲಿದ್ದು, ಸಂಪುಟ ಸಭೆಯ ಮುಂದೆ ಅನುಮೋದನೆಗಾಗಿ ಮಂಡಿಸಬೇಕಾಗಿದೆ. ಶೀಘ್ರದಲ್ಲೇ ಮೀಸಲಾತಿ ಪ್ರಸ್ತಾಪವನ್ನು ಸಂಪುಟ ಸಭೆ ಮುಂದೆ ಇಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದರಂತೆ ರಾಜ್ಯದಲ್ಲಿ ಬ್ರಾಹ್ಮಣ, ಜೈನ್, ಮುದಲಿಯಾರ್, ವೈಷ್ಯರು, ನಾಯರ್ಗಳ ಜೊತೆಗೆ ಇತರ ಸಾಮಾನ್ಯ ವರ್ಗದ ಸಮುದಾಯಕ್ಕೆ ಈ ಮೀಸಲಾತಿ ಲಾಭ ದೊರಕಲಿದೆ. ಆದರೆ ರಾಜ್ಯದಲ್ಲಿ ಮೀಸಲಾತಿ 10% ಗಿಂತ ಕಡಿಮೆ ಇರಲಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಸುಮಾರು 3-4%ದಷ್ಟು ಸಾಮನ್ಯ ವರ್ಗದವರಿಗೆ ಮೀಸಲಾತಿ ಲಭ್ಯವಾಗುವ ಸಾಧ್ಯತೆ ಎಂದು ಹೇಳಲಾಗಿದೆ.
ಮೀಸಲಾತಿ ಜಾರಿ ವಿಳಂಬವಾಗಲು ಕಾರಣ: ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನೀಡಲು ಸಿಎಂ ಇಚ್ಚಿಸಿದ್ದರೂ, ಆಡಳಿತ ವರ್ಗದಲ್ಲಿ ಮತ್ತು ರಾಜಕೀಯವಾಗಿ ಒತ್ತಡಗಳು ಎದುರಾಗಿವೆ. ರಾಜಕೀಯ ಕಾರಣಗಳು ಇದರ ಜಾರಿಗೆ ದೊಡ್ಡ ಕಂಟಕವಾಗಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಕುರುಬ ಸಮುದಾಯ ಸೇರಿದಂತೆ ಇತರ ಹಿಂದುಳಿದ ವರ್ಗಗಳ ಸಮುದಾಯದವರು ಮೀಸಲಾತಿ ಹೆಚ್ಚಳಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಸಂದರ್ಭ ಇಡಬ್ಲ್ಯುಎಸ್ ಮೀಸಲಾತಿ ಜಾರಿ ಸಂಮಂಜಸವಲ್ಲ ಎಂದು ಅಧಿಕಾರಿಗಳೂ ಸಿಎಂಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಇಡಬ್ಲ್ಯುಎಸ್ ಮೀಸಲಾತಿ ಜಾರಿಯಿಂದ ಸರ್ಕಾರದ ಮೇಲೆ ಆರ್ಥಿಕ ಹೊರೆಯೂ ಬೀಳಲಿದೆ. ಮೀಸಲಾತಿ ಜಾರಿಗೊಳಿಸಿದರೆ ಸರ್ಕಾರದ ಮೇಲೆ ಸುಮಾರು 900-1000 ಕೋಟಿ ರೂ. ಆರ್ಥಿಕ ಹೊರೆ ಬೀಳಲಿದೆ. ಸದ್ಯದ ಆರ್ಥಿಕ ಸಂಕಷ್ಟದ ಸಮಯದಲ್ಲಿ ಇಷ್ಟೊಂದು ದೊಡ್ಡ ಮಟ್ಟಿನ ಹೊರೆ ತೆಗೆದುಕೊಳ್ಳಲು ಆರ್ಥಿಕ ಇಲಾಖೆಯೂ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.