ಬೆಂಗಳೂರು: ಕೆಆರ್ಎಸ್ ಅಣೆಕಟ್ಟು ಬಿರುಕು ವಿಚಾರ ರಾಜ್ಯದಲ್ಲಿ ಜೋರಾಗಿ ಸದ್ದು ಮಾಡುತ್ತಿರುವ ಸುದ್ದಿ. ಅಕ್ರಮ ಗಣಿಗಾರಿಕೆಯಿಂದಾಗಿ ಅಣೆಕಟ್ಟು ಬಿರುಕು ಆರೋಪ ಮುನ್ನಲೆಗೆ ಬಂದಿದ್ದು, ಸಂಸದೆ ಸುಮಲತಾ-ಹೆಚ್ಡಿಕೆ ಮಧ್ಯೆ ಟಾಕ್ ವಾರ್ಗೆ ಕಾರಣವಾಗಿದೆ. ಅಷ್ಟಕ್ಕೂ ಕೆಆರ್ಎಸ್ ಅಣೆಕಟ್ಟು ಸುತ್ತಮುತ್ತ ಪ್ರದೇಶಗಳಲ್ಲಿನ ಗಣಿಗಾರಿಕೆಯ ಸ್ಥಿತಿಗತಿ ಏನು ಎಂಬುದರ ವರದಿ ಇಲ್ಲಿದೆ.
ಕಳೆದ ಒಂದು ವಾರದಿಂದ ಸಂಸದೆ ಸುಮಲತಾ ಹಾಗೂ ಜೆಡಿಎಸ್ ಪಕ್ಷದ ನಾಯಕರ ನಡುವೆ ಕೆಆರ್ಎಸ್ ಅಣೆಕಟ್ಟು ಬಿರುಕು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹೀಗಾಗಿ ಕೆಆರ್ಎಸ್ ಅಣೆಕಟ್ಟು ಬಳಿಯ ಬೇಬಿ ಬೆಟ್ಟ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿನ ಕಲ್ಲು ಗಣಿಗಾರಿಕೆಯ ವಿಚಾರವನ್ನು ಮುನ್ನಲೆಗೆ ತಂದಿದೆ.
ಕೆಆರ್ಎಸ್ ಅಣೆಕಟ್ಟು ವ್ಯಾಪ್ತಿಯಲ್ಲಿ ಬರುವ ಬೇಬಿ ಬೆಟ್ಟ ಹಾಗೂ ಅದರ ಸುತ್ತಮುತ್ತ ಪ್ರದೇಶಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬುದು ಕೇಳಿ ಬರುತ್ತಿರುವ ಆರೋಪ. ನಿಷೇಧಾಜ್ಞೆಯ ಮಧ್ಯೆಯೂ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಈ ಬಗ್ಗೆ ಗಣಿಗಾರಿಕೆ ಹಾಗೂ ಭೂ ವಿಜ್ಞಾನ ಇಲಾಖೆ ನೀಡಿರುವ ಅಂಕಿ-ಅಂಶದಂತೆ ಸದ್ಯ ಬೇಬಿ ಬೆಟ್ಟ ಹಾಗೂ ಸುತ್ತಮುತ್ತಲಿನ ಕಲ್ಲು ಗಣಿಗಾರಿಕೆಯ ಸ್ಥಿತಿಗತಿಯ ಚಿತ್ರಣವನ್ನು ತೋರಿಸುತ್ತದೆ.
ಬೇಬಿ ಬೆಟ್ಟ, ಸುತ್ತಮುತ್ತಲಿನ ಗಣಿಗಾರಿಕೆ:
ಗಣಿಗಾರಿಕೆ ಇಲಾಖೆ ನೀಡಿರುವ ಮಾಹಿತಿಯಂತೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಸರ್ವೆ ನಂ.1 ರಲ್ಲಿ ಆಗಸ್ಟ್ 1994 ರಿಂದ ಡಿಸೆಂಬರ್ 28, 2018 ರವರೆಗೆ 114 ಕಲ್ಲುಗಣಿ ಗುತ್ತಿಗೆಗಳನ್ನು ಮಂಜೂರು ಮಾಡಲಾಗಿದೆ. ಈ ಪೈಕಿ ಚಾಲ್ತಿಯಲ್ಲಿದ್ದ 30 ಕಲ್ಲುಗಣಿ ಗುತ್ತಿಗೆಗಳನ್ನು ಜನವರಿ 30, 2020 ರಂದು ರದ್ದುಪಡಿಸಲಾಗಿದೆ. ಪ್ರಸ್ತುತ ಯಾವುದೇ ಕಲ್ಲು ಗಣಿಗಾರಿಕೆ ಗುತ್ತಿಗೆಗಳು ಇಲ್ಲ ಎಂದು ತಿಳಿಸಿದೆ.
ಕಲ್ಲು ಗಣಿಗಾರಿಕೆಯಲ್ಲಿ ಸ್ಫೋಟಕ ಬಳಸಲು ಅನುಮತಿ ಕಡ್ಡಾಯ. ಆದರೆ, ಪಾಂಡವಪುರ ವ್ಯಾಪ್ತಿಯಲ್ಲಿ ಸ್ಫೋಟಕ ಬಳಕೆಗೆ ಅನುಮತಿ ಇಲ್ಲದೆ ಕಲ್ಲುಗಣಿಗಾರಿಕೆ ನಡೆಸಿದ್ದ 81 ಜನರ ಮೇಲೆ 13 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಕಲ್ಲುಗಣಿ ಚುಟುವಟಿಕೆ ಸಂಬಂಧ 2020-21ನೇ ಸಾಲಿನಲ್ಲಿ 236 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, 2 ಮೊಕದ್ದಮೆಗಳನ್ನು ದಾಖಲು ಮಾಡಲಾಗಿದೆ.
ಡಿಸಿ, ಇಲಾಖೆ ಕೈಗೊಂಡ ಕ್ರಮಗಳೇನು?: 2018ರಂದು ನಡೆದ ಮಂಡ್ಯ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ (ಗಣಿ) ಸಭೆಯಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ನಿಯಂತ್ರಿಸಲು 3 ತಂಡಗಳನ್ನು ರಚಿಸಿ ಅನಧಿಕೃತ ಗಣಿಗಾರಿಕೆಗೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟಲು ನಿರ್ಧರಿಸಿತ್ತು.
ಮಂಡ್ಯ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ನಡವಳಿಯಂತೆ ಪಾಂಡವಪುರ ತಾಲೂಕು ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿದ್ದ 30 ಕಲ್ಲುಗಣಿ ಗುತ್ತಿಗೆಗಳನ್ನು ಸುಪ್ರೀಂಕೋರ್ಟ್ ಆದೇಶ ಹಾಗೂ ಕೇಂದ್ರ ಅರಣ್ಯ ಹಾಗೂ ಪರಿಸರ ಮಂತ್ರಾಲಯ ನೀಡಿದ ಮಾರ್ಗಸೂಚಿ ಹಾಗೂ ಅವಧಿ - ವಿಸ್ತರಣೆಯಲ್ಲಿ ನೀಡಿದ ಷರತ್ತುಗಳು ಉಲ್ಲಂಘನೆಯಾಗಿರುವುದು ಕಂಡುಬಂದ ಹಿನ್ನೆಲೆ ಜನವರಿ 30, 2020ರಂದು ರದ್ದುಪಡಿಸಲಾಗಿದೆ ಎಂದು ತಿಳಿಸಿದೆ.
ಪಾಂಡವಪುರ ಉಪವಿಭಾಗದ ಉಪವಿಭಾಗಾಧಿಕಾರಿ, ಇವರ ಆದೇಶದಂತೆ ಜನವರಿ 25, 2021 ರಿಂದ ಮಾರ್ಚ್ 24, 2021ರ ವರೆಗೆ ಪಾಂಡವಪುರ ತಾಲೂಕಿನ 18 ಗ್ರಾಮಗಳಲ್ಲಿ 144 ಸೆಕ್ಷನ್ ಜಾರಿ ಮಾಡಿತ್ತು. ಅದರಂತೆ ಯಾವುದೇ ರೀತಿಯ ಗಣಿಗಾರಿಕೆ, ಕ್ರಷರ್ ಚಟುವಟಿಕೆಗಳನ್ನು ನಡೆಸದಂತೆ ನಿಷೇಧಾಜ್ಞೆ ಹೇರಲಾಗಿತ್ತು.
ತಹಶೀಲ್ದಾರ್ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದ್ದು ಏನು?:
ಪಾಂಡವಪುರ ಉಪವಿಭಾಗಾಧಿಕಾರಿಗಳ ನಿರ್ದೇಶನದಂತೆ ತಾಲೂಕು ವ್ಯಾಪ್ತಿಯಲ್ಲಿ 2020-21ನೇ ಸಾಲಿನಲ್ಲಿ ಅನುಮತಿ ಪಡೆದಿರುವ ಹಾಗೂ ಪಡೆಯದಿರುವ ಕಲ್ಲು ಗಣಿ ಗುತ್ತಿಗೆಗಳ ಮತ್ತು ಜಲ್ಲಿ ಕ್ರಷರ್‌ಗಳ ಬಗ್ಗೆ ಇದೇ ಜನವರಿ 22, 23 ಮತ್ತು 24 ರಂದು ಬೇಬಿ ಬೆಟ್ಟದ ಕಾವಲ್ ಗ್ರಾಮ ಮತ್ತು ಸುತ್ತಮುತ್ತ ಪರಿಶೀಲನೆ ನಡೆಸಲಾಗಿತ್ತು.
ಪಾಂಡವಪುರ ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಸ್ಥಳ ಪರಿಶೀಲನೆ ವೇಳೆ ಕಲ್ಲು ಗಣಿ ಗುತ್ತಿಗೆ ಮಾಡಲು ಮತ್ತು ಜಲ್ಲಿ ಕ್ರಷರ್‌ಗಳ ಅನುಮತಿ ಪಡೆದಿರುವ 9 ಪ್ರಕರಣಗಳಲ್ಲಿ ಕಲ್ಲು ಗಣಿ ಗುತ್ತಿಗೆ ಅವಧಿ ವಿಸ್ತರಣೆಯಾಗಿದ್ದು, ಇ.ಸಿ. ಪಡೆಯಲಾಗಿದೆ. ಜಲ್ಲಿ ಕ್ರಷರ್‌ಗಳಿಗೆ ಸಂಬಂಧಿಸಿದಂತೆ, ಹೊಸ ತಿದ್ದುಪಡಿ ನಿಯಮ 2013ರಂತೆ ಜಲ್ಲಿ ಕ್ರಷರ್ ಸ್ಥಾಪಿಸಲು ಕೋರಿ ಒಟ್ಟು 24 ಅರ್ಜಿಗಳು (ಫಾರಂ ಬಿ) ಹಾಗೂ 23 ಪ್ರಕರಣಗಳು (ಫಾರಂ-ಸಿ) ಸಲ್ಲಿಸಿದ್ದಾರೆ.
ಸ್ಥಳ ಪರಿಶೀಲನಾ ಸಮಯದಲ್ಲಿ ಕೆಲವು ಪ್ರದೇಶಗಳಲ್ಲಿ ಅಲ್ಲಲ್ಲಿ ಗಣಿಗಾರಿಕೆ ಮಾಡಿರುವ ಕುರುಹುಗಳು ಪತ್ತೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ವೇಳೆ ವಾಹನ, ಲಾರಿಗಳನ್ನು ಜಪ್ತಿ ಮಾಡಲಾಗಿತ್ತು. ಇದೀಗ ಮತ್ತೆ ಅಕ್ರಮ ಗಣಿಗಾರಿಕೆಯ ಸದ್ದು ಬಂದ ಹಿನ್ನೆಲೆ ಜಿಲ್ಲಾಧಿಕಾರಿ, ಗಣಿಗಾರಿಕೆ ಇಲಾಖೆ ಪರಿಶೀಲನೆ ನಡೆಸಲು ಮುಂದಾಗಿದೆ.
ಇದನ್ನೂ ಓದಿ: ಗಣಿಗಾರಿಕೆ ಸಮಸ್ಯೆಗಳ ಶೀಘ್ರ ಇತ್ಯರ್ಥಕ್ಕಾಗಿ 'ಡಿಜಿಟಲ್ ಮೈನಿಂಗ್ ಅದಾಲತ್ 'ಗೆ ಗಣಿ ಇಲಾಖೆ ಸಿದ್ಧತೆ