ಬೆಂಗಳೂರು : ಬೆಂಗಳೂರಿನ ವೈಟ್ಫೀಲ್ಡ್ ನಲ್ಲಿರುವ ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ನಲ್ಲಿ ಭಾರತ ಬಯೋಟೆಕ್ ನಿರ್ಮಿತ ಕೋವ್ಯಾಕ್ಸಿನ್ ಕೋವಿಡ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಿನ್ನೆಯಿಂದ ಆರಂಭಗೊಂಡಿದೆ.
ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆಯ ಮಾನವ ಪ್ರಯೋಗಕ್ಕೆ ಭಾರತೀಯ ಔಷಧ ಸಂಶೋಧನಾ ಪರಿಷತ್ ಅನುಮತಿ ನೀಡಿದ್ದು, ದೇಶವ್ಯಾಪಿ 12 ರಾಜ್ಯಗಳಲ್ಲಿ 25 ಕಡೆ ಪ್ರಯೋಗ ನಡೆಯಲಿದೆ. ರಾಜ್ಯದಲ್ಲಿ ವೈದೇಹಿ ಆಸ್ಪತ್ರೆಯನ್ನು ಆಯ್ಕೆ ಮಾಡಲಾಗಿದೆ.
ಕೋವ್ಯಾಕ್ಸಿನ್ ಕುರಿತು ಈ ಟಿವಿ ಭಾರತ್ ಜೊತೆ ಮಾತನಾಡಿದ ಆಸ್ಪತ್ರೆಯ ನಿರ್ದೇಶಕ ರಾಜೇಶ್ ನಾಯ್ಡು, ವೈದೇಹಿ ಆಸ್ಪತ್ರೆಯ ನುರಿತ ತಜ್ಞ ವೈದ್ಯರು ಮತ್ತು ಸಿಬ್ಬಂದಿ ಈ ಪ್ರಯೋಗ ನಡೆಸಿಕೊಡಲಿದ್ದಾರೆ. ನಮ್ಮ ಸಿಬ್ಬಂದಿ ಸಹ ಲಸಿಕೆ ಪಡೆಯಲಿದ್ದಾರೆ. ಹಾಗೂ ಸಾರ್ವಜನಿಕರು ಸ್ವಯಂ ಸೇವಕರು ಮುಂದೆ ಬರುತ್ತಿದ್ದಾರೆ. ಅವರ ಮೂಲಕ ಕೋವ್ಯಾಕ್ಸಿನ್ ಪ್ರಯೋಗ ಮಾಡುತ್ತಿದ್ದು, ಫಲಿತಾಂಶ ಪಡೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.
ಸಾವಿರಕ್ಕಿಂತ ಹೆಚ್ಚು ಮಂದಿ ಮೇಲೆ ಪ್ರಯೋಗ ನಡೆಸಲು ಸರ್ಕಾರ ತಿಳಿಸಿದೆ. ಪ್ರಯೋಗಕ್ಕೆ ಒಡ್ಡಿಕೊಳ್ಳಲು ಸ್ವಯಂ ಪ್ರೇರಿತರಾಗಿ ಮುಂದೆ ಬರುವ 18 ವರ್ಷ ಮೇಲ್ಪಟ್ಟ ಆರೋಗ್ಯವಂತರಿಗೆ ಪ್ರಾಯೋಗಿಕವಾಗಿ ಲಸಿಕೆ ನೀಡಲಾಗುತ್ತದೆ. 50ಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ. ಒಟ್ಟು ಒಂದು ಸಾವಿರ ಮಂದಿಗೆ ಲಸಿಕೆ ನೀಡಿ ಲಸಿಕೆ ಪರಿಣಾಮ ಅಧ್ಯಯನಕ್ಕೆ ಒಳಪಡಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಲಸಿಕೆ ತೆಗೆದುಕೊಳ್ಳುವ ಮೊದಲು ವ್ಯಕ್ತಿಯ ಸಂಪೂರ್ಣ ಆರೋಗ್ಯ ತಪಾಸಣೆ ನಡೆಯಲಿದೆ. ಲಸಿಕೆ ಪಡೆದ ವ್ಯಕ್ತಿ ಎರಡು ಗಂಟೆ ಕಾಲ ಆಸ್ಪತ್ರೆಯಲ್ಲೇ ಇರಬೇಕು. ಆ ಬಳಿಕ 14 ದಿನಗಳ ಕಾಲ ನಿತ್ಯ ಆತನ ಆರೋಗ್ಯದ ಮೇಲೆ ವೈದೇಹಿ ಆಸ್ಪತ್ರೆಯ ವೈದ್ಯರು ಖುದ್ದು ಭೇಟಿ ನೀಡಿ ಅಥವಾ ದೂರವಾಣಿ ಮೂಲಕ ನಿಗಾ ಇಡುತ್ತಾರೆ. ಪ್ರಯೋಗಕ್ಕೆ ಒಮ್ಮೆ ಲಸಿಕೆಯ ಡೋಸ್ ಪಡೆದವರಿಗೆ 28 ದಿನದ ಬಳಿಕ ಮತ್ತೊಮ್ಮೆ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಆ ಬಳಿಕವೂ ವೈದ್ಯರ ನಿಗಾ ಇರಲಿದೆ. ಲಸಿಕೆ ಪಡೆದವರ ಮೇಲೆ 45 ದಿನಗಳವರೆಗೆ ನಿಗಾ ಇರಲಿದ್ದು, ಆ ಬಳಿಕವೂ ಅಗತ್ಯವಾದರೆ ಕಾಳಜಿ ವಹಿಸಲಾಗುತ್ತದೆ. ಪ್ರತಿ ದಿನದ ವರದಿ ಐಸಿಎಂಆರ್‌ಗೆ ಸಲ್ಲಿಸಲಾಗುತ್ತದೆ. ಬಳಿಕ ಫಲಿತಾಂಶ ಗೌಪ್ಯವಾಗಿ ಐಸಿಎಂಆರ್‌ಗೆ ಸಲ್ಲಿಸಲಾಗುತ್ತದೆ. ಪ್ರಯೋಗದಲ್ಲಿ ಭಾಗಿಯಾಗುವ ಆಸಕ್ತಿ ಇರುವವರು ವೈದೇಹಿ ಆಸ್ಪತ್ರೆಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಕೋವ್ಯಾಕ್ಸಿನ್ ಕಂಡು ಹಿಡಿಯಲು ಸಾವಿರಾರು ಕಂಪನಿಗಳು ಮುಂದೆ ಬಂದಿದ್ದವು, ಅದರಲ್ಲಿ ಕೆಲವು ಕಂಪನಿಗಳು ಮಾತ್ರ ಫೈನಲ್ ಹಂತಕ್ಕೆ ತಲುಪಿದ್ದು, ಅದರಲ್ಲಿ ವೈದೇಹಿ ಇನ್ಸ್ಟಿಟ್ಯೂಟ್ ಒಂದಾಗಿದೆ. ಇದಕ್ಕೂ ಮುನ್ನ ಎರಡು ಹಂತಗಳ ಪ್ರಯೋಗ ಆಗಿದ್ದು, ಮೂರನೇ ಹಂತ ಕೋವ್ಯಾಕ್ಸಿನ್ ಪ್ರಯೋಗ ಮಾಡಲು ಭಾರತ ಸರ್ಕಾರದ ಅನುಮತಿ ಸಿಕ್ಕಿದೆ. ಎರಡನೇ ಅಲೆ ಸೋಂಕು ತಡೆಯಲು ನಮ್ಮ ವೈದ್ಯಕೀಯ ಸಿಬ್ಬಂದಿ ಉತ್ತಮ ರೀತಿಯಲ್ಲಿ ಸಿದ್ದವಾಗಿದೆ. ಮೊದಲು ಕೊರೊನಾ ಬಂದಾಗ ಯಾವರೀತಿ ಚಿಕಿತ್ಸೆ ನೀಡಬೇಕು ಎಂದು ಗೊತ್ತಿರಲಿಲ್ಲ. ಆದರೆ, ಈಗ ವೈದ್ಯರಿಗೆ ಸಂಪೂರ್ಣ ಮಾಹಿತಿ ಇರುವುದರಿಂದ ಮೊದಲಿನಂತೆ ಯಾವುದೇ ಸಾವು - ನೋವು ಸಂಭವಿಸುವುದಿಲ್ಲ ಎಂದರು.
ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಸಾಕಷ್ಟು ಪ್ರಮಾಣದಲ್ಲಿ ಮುಂದೆ ಬಂದರೆ, ಲಸಿಕೆ ಪ್ರಯೋಗಗಳು ಹೆಚ್ಚು - ಹೆಚ್ಚು ಆದಾಗ ಆದಷ್ಟು ಬೇಗ ಕೋವ್ಯಾಕ್ಸಿನ್ನ ಫಲಿತಾಂಶ ಬರುತ್ತದೆ . ಪೂರ್ವ ಕಾಯಿಲೆ ಇರುವವರು, ಈ ಹಿಂದೆ ಕೋವಿಡ್ - 19 ಬಂದಿದ್ದು, ಪ್ರತಿಕಾಯ ಇರುವವರು ಪ್ರಯೋಗದಲ್ಲಿ ಭಾಗವಹಿಸುವಂತಿಲ್ಲ. ರಾಜ್ಯದ ಯಾವುದೇ ಭಾಗದ ವ್ಯಕ್ತಿ ಪ್ರಯೋಗದಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದರು.