ಬೆಂಗಳೂರು: ಸ್ಯಾಂಡಲ್ವುಡ್ನ ಕನಸುಗಾರ ರವಿಚಂದ್ರನ್ ಮಗಳ ಮದುವೆ ನಂತರ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ದೃಶ್ಯ ಚಿತ್ರದಲ್ಲಿ ರಾಜೇಂದ್ರ ಪೊನ್ನಪ್ಪನಾಗಿ ಮಿಂಚಿದ್ದ ಕ್ರೇಜಿಸ್ಟಾರ್ ಈಗ ರವಿ ಬೋಪಣ್ಣನ ಅವತಾರಕ್ಕೆ ರೆಡಿಯಾಗಿದ್ದಾರೆ.
ಈ ವಿಷಯವನ್ನು ಕ್ರೇಜಿಸ್ಟಾರ್ ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮಾಧ್ಯಮಗಳ ಜೊತೆ ಹಂಚಿಕೊಂಡರು.
ರವಿ ಬೋಪಣ್ಣ ಚಿತ್ರದಲ್ಲಿ ಕ್ರೇಜಿಸ್ಟಾರ್ ನಟನೆ ಜೊತೆಗೆ ನಿರ್ದೇಶನವನ್ನು ಮಾಡುತ್ತಿದ್ದು ಮಲ್ಲ ಚಿತ್ರ ತಂಡವೇ ಈ ಚಿತ್ರದಲ್ಲಿ ಒಂದಾಗಿರುವುದು ಮತ್ತೊಂದು ವಿಶೇಷವಾಗಿದೆ. ರವಿ ಬೋಪಣ್ಣ ಚಿತ್ರದಲ್ಲಿ ರವಿಮಾಮ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಲಿದ್ದು, ದೃಶ್ಯಾ ಚಿತ್ರದ ಸ್ಟೈಲ್ನಲ್ಲೇ ಈ ಸಿನಿಮಾ ಮೂಡಿಬರಲಿದೆಯಂತೆ.
ಚಿತ್ರದಲ್ಲಿ ಇಬ್ಬರು ನಾಯಕರಿದ್ದಾರೆ. ಕಾವ್ಯ ಶೆಟ್ಟಿ ಈಗಾಗಲೇ ಫೈನಲ್ ಆಗಿದ್ದು ಮತ್ತೊಬ್ಬ ನಾಯಕಿಯ ಹುಡುಕಾಟದಲ್ಲಿ ರವಿಚಂದ್ರನ್ ಇದ್ದಾರೆ.
ಚಿತ್ರದ ಶೂಟಿಂಗ್ ಬಹುತೇಕ ಮಡಿಕೇರಿಯ ಸುಂಟಿಕೊಪ್ಪದಲ್ಲಿ ನಡೆಯಲಿದ್ದು, ಸುಮಾರು 40 ದಿನಗಳಲ್ಲಿ ಚಿತ್ರದ ಶೂಟಿಂಗ್ ಕಂಪ್ಲಿಟ್ ಮಾಡಲು ರಣಧೀರ ಪ್ಲಾನ್ ಮಾಡಿಕೊಂಡಿದ್ದಾರೆ. ಅಲ್ಲದೇ ಬೋಪಣ್ಣ ಚಿತ್ರದಲ್ಲಿ ಹೆಬ್ಬುಲಿ ನಂತರ ಕಿಚ್ಚ ಸುದೀಪ್, ರವಿಚಂದ್ರನ್ ಅವರ ಜೊತೆ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈಗಾಗಲೇ ಕಿಚ್ಚ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದು ನೀವು ಯಾವಾಗ ಕರೆಯುತ್ತಿರೋ ಆವಾಗ ನಾನು ಬಂದು ಶೂಟಿಂಗ್ನಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಸುದೀಪ್ ನನಗೆ ಭರವಸೆ ಕೊಟ್ಟಿದ್ದಾನೆ. ಅಲ್ಲದೆ ಆತ ನನಗೆ ಹಿರಿಯ ಮಗನಿದ್ದಂತೆ ಎಂದು ರವಿಮಾಮ ಪ್ರೀತಿಯಿಂದ ಹೇಳಿದರು.
ರವಿ ಬೋಪಣ್ಣ ಚಿತ್ರ ಆಗಲೇ ಶೂಟಿಂಗ್ ಆರಂಭವಾಗಬೇಕಿತ್ತು. ಆದರೆ ಮಡಿಕೇರಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಚಿತ್ರದ ಶೂಟಿಂಗ್ ಸ್ವಲ್ಪ ದಿನದ ಮಟ್ಟಿಗೆ ಮುಂದಕ್ಕೆ ಹಾಕಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ರವಿಚಂದ್ರನ್ ಅವರೇ ಚಿತ್ರಕ್ಕೆ ಸಂಗೀತ ನೀಡಿದ್ದು ಈಗಾಗಲೇ ಕಂಪೋಸ್ ಕೆಲಸ ಕಂಪ್ಲೀಟ್ ಆಗಿದೆ.
ಈ ಚಿತ್ರದಲ್ಲಿ ಮಲ್ಲ ಚಿತ್ರದ ರೀತಿಯಲ್ಲಿ ಸ್ನೇಹಿತರ ಹಾಡು ಇರಲಿದ್ದು ಚಿತ್ರದಲ್ಲಿ ಸ್ನೇಹಿತನಾಗಿ ನಟ ಮೋಹನ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ಸಂಭಾಷಣೆಯನ್ನು ಅವರೇ ಬರೆಯುತ್ತಿದ್ದಾರೆ ಎಂದು ಕ್ರೇಜಿಸ್ಟಾರ್ ತಿಳಿಸಿದರು. ಈ ಸಿನಿಮಾ ಗ್ಯಾರಂಟಿ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಲಿದೆ ಎಂದು ಕ್ರೇಜಿಸ್ಟಾರ್ ಸಕತ್ ಹುಮ್ಮಸ್ಸಿನಿಂದಲೇ ತಿಳಿಸಿದ್ರು.