ನೆಲಮಂಗಲ : ಪಿಎಸ್ಐಯೊಬ್ಬರು ಕರವೇ ಉಪಾಧ್ಯಕ್ಷನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ಪೊಲೀಸರು ಮತ್ತು ಸಂಘಟನೆಗಳ ಪ್ರತಿಷ್ಠೆಗೆ ಕಾರಣವಾಗಿದೆ. ಸಂಘಟನೆಗಳ ಮುಖಂಡರು ಪಿಎಸ್ಐ ಅಮಾನತು ಮಾಡುವಂತೆ ಮನವಿ ಮಾಡಿದ್ದಾರೆ. ಸಂಘಟನೆಗಳು ನೊಂದವರ ಪರವಾಗಿರಬೇಕೆಂದು ಎಸ್ಪಿ ರವಿ ಡಿ ಚನ್ನಣ್ಣನವರ್ ಹೇಳಿದರು.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಟೌನ್ ಪೊಲೀಸರು ಲೋಕೇಶ್ ಮತ್ತು ರಂಗಸ್ವಾಮಿಯವರನ್ನ ವಶಕ್ಕೆ ಪಡೆದಿದ್ದರು. ಈ ಸಮಯದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಉಪಾಧ್ಯಕ್ಷ ಉಮೇಶ್ ಗೌಡ ಬಂಧಿತರನ್ನ ಮಾತನಾಡಿಸಿದ್ದಾರೆ. ಈ ವಿಚಾರಕ್ಕೆ ಪಿಎಸ್ಐ ಸುರೇಶ್ ಉಮೇಶ್ ಗೌಡರಿಗೆ ಕಪಾಳ ಮೋಕ್ಷ ಮಾಡಿದ್ದು, ಕನ್ನಡ ಸಂಘಟನೆ ಅಕ್ರೋಶಕ್ಕೆ ಕಾರಣವಾಗಿದೆ. ಪಿಎಸ್ ಐ ಸುರೇಶ್ರನ್ನು ಅಮಾನತು ಮಾಡುವಂತೆ ಠಾಣೆಗೆ ಬಂದು ಡಿವೈಎಸ್ಪಿ ಮೋಹನ್ರಿಗೆ ಮನವಿ ಸಲ್ಲಿದರು .
ಕರವೇ ಉಪಾಧ್ಯಕ್ಷನ ಕಪಾಳ ಮೋಕ್ಷ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್, ರೈತನ ಜಮೀನಿನ ಫೇಕ್ ಜಿಪಿಎ ಸೃಷ್ಟಿಸಿ ಖಾತೆ ತಿದ್ದುಪಡಿ ಮಾಡಿದ ಹಿನ್ನೆಲೆ ಲೋಕೇಶ್ ಮತ್ತು ರಂಗಸ್ವಾಮಿ ಎಂಬುವರನ್ನ ವಶಕ್ಕೆ ಪಡೆದ ನೆಲಮಂಗಲ ಟೌನ್ ಪೊಲೀಸರು ನ್ಯಾಯಾಂಗ ಬಂಧನದಲ್ಲಿರಿಸಿದರು.
ಈ ಸಮಯದಲ್ಲಿ ಠಾಣೆಯಲ್ಲಿದ್ದವರ ಪರವಾಗಿ ಬಂದ ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಉಪಾಧ್ಯಕ್ಷ ಉಮೇಶ್ ಗೌಡ ಪಿಎಸ್ಐ ಅನುಮತಿ ಇಲ್ಲದೆ ಮಾತನಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉಮೇಶ್ ಗೌಡ ಮತ್ತು ಪಿಎಸ್ಐ ಸುರೇಶ್ ನಡುವೆ ಮಾತಿನ ಚಕಮಕಿ ನಡೆದು ಪಿಎಸ್ಐ ಉಮೇಶ್ ಗೌಡರಿಗೆ ಕಪಾಳ ಮೋಕ್ಷ ಮಾಡಿದರು. ಇದಕ್ಕೆ ಸಂಬಂಧಿಸಿದಂತೆ ಪಿಎಸ್ಐ ಸುರೇಶ್ ಹೆಚ್ಚುವರಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.
ಪೊಲೀಸ್ ಸ್ಟೇಷನ್ ಒಂದು ದೇವಾಲಯ ಇದ್ದಂತೆ. ಸಂಘಟನೆಗಳ ಮುಖಂಡರು ನೊಂದವರ ಪರವಾಗಿ ಠಾಣೆಗೆ ಬರಬೇಕು. ವೈಟ್ ಕಲರ್ ಕ್ರಿಮಿನಲ್ಗಳ ಪರ ಬರಬಾರದು. ಕಿರಿಯ ಪೊಲೀಸ್ ಅಧಿಕಾರಿಗಳ ಬಗ್ಗೆ ಸಮಸ್ಯೆ ಇದ್ದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಬೇಕೆಂದು ರವಿ ಚನ್ನಣ್ಣನವರ್ ಹೇಳಿದರು.