ಬೆಂಗಳೂರು: ಹಸಿವು ಮುಕ್ತ ರಾಜ್ಯ ನಿರ್ಮಾಣದಲ್ಲಿ ಅನ್ನಭಾಗ್ಯ ಯೋಜನೆ ಪ್ರಮುಖವಾಗಿದ್ದು, ಮೂರು ಮಾದರಿಯಲ್ಲಿ ರಾಜ್ಯ ಸರ್ಕಾರ ಪಡಿತರ ವಿತರಣಾ ವ್ಯವಸ್ಥೆ ಕಲ್ಪಿಸಿದೆ. ಅಂತ್ಯೋದಯ, ಆದ್ಯತಾ, ಆದ್ಯೇತರ ವರ್ಗಗಳನ್ನಾಗಿ ಪರಿವರ್ತಿಸಿ ಪಡಿತರ ವಿತರಣೆ ಮಾಡುತ್ತಿದೆ. ರಾಜ್ಯದ 1.16 ಕೋಟಿ ಕುಟುಂಬ ಆದ್ಯತಾ ಪಡಿತರ ಚೀಟಿ ಹೊಂದಿದ್ದು, ಆಹಾರ ಇಲಾಖೆಯ ಪಡಿತರ ಸೌಲಭ್ಯ ಪಡೆದುಕೊಳ್ಳುತ್ತಿದೆ. ಇದರಲ್ಲಿಯೂ ನಕಲಿಗಳ ಹಾವಳಿ ವ್ಯಾಪಕವಾಗಿದ್ದು, ಇದರ ತಡೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ.
ಅಂತ್ಯೋದಯ ಪಡಿತರ ಚೀಟಿ ಯಾರು ಪಡೆಯಬಹುದು : ಭೂರಹಿತ ಕೃಷಿ ಕಾರ್ಮಿಕರು, ಅಂಚಿನ ಕೃಷಿಕರು, ಗ್ರಾಮೀಣ ಕುಶಲಕರ್ಮಿಗಳಾದ ಮಡಿಕೆ ಮಾಡುವವರು, ಚರ್ಮಕಾರರು, ನೇಕಾರರು, ಕಮ್ಮಾರರು, ಬಡಗಿಗಳು, ಕೊಳಚೆ ನಿವಾಸಿಗಳು ಅಂತ್ಯೋದಯ ಪಡಿತರ ಚೀಟಿ ಪಡೆಯಲು ಅರ್ಹರಾಗಿದ್ದಾರೆ. ಇವರ ಜೊತೆ ವಿಧವೆಯರು ಮುಖ್ಯಸ್ಥರಾಗಿರುವ ಕುಟುಂಬ, ಸಂಪೂರ್ಣ ಅನಾರೋಗ್ಯಕ್ಕೆ ಒಳಗಾಗಿರುವ ವ್ಯಕ್ತಿಗಳು, ವಿಶೇಷ ಚೇತನರು, 60 ವರ್ಷ ತುಂಬಿದ ವ್ಯಕ್ತಿಗಳು, ನಿರ್ದಿಷ್ಟ ಜೀವನೋಪಾಯ ಮಾರ್ಗೋಪಾಯವಿಲ್ಲದ ವ್ಯಕ್ತಿಗಳು, ಸಾಮಾಜಿಕ ಬೆಂಬಲವಿಲ್ಲದ ಕುಟುಂಬಗಳಲ್ಲಿನ ಬಡವರಲ್ಲಿ ಅತಿ ಬಡವರು 15 ಸಾವಿರಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರುವ ಕುಟುಂಬಗಳು ಅಂತ್ಯೋದಯ ಪಡಿತರ ಚೀಟಿಯನ್ನು ಪಡೆಯಬಹುದಾಗಿದೆ.
ಆದ್ಯತಾ ಪಡಿತರ ಚೀಟಿಗೆ ಒಳಪಡದವರು : ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆದ್ಯತಾ ಪಡಿತರ ಚೀಟಿ ನೀಡಲಾಗುತ್ತದೆ. ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲ ಖಾಯಂ ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು ಆದ್ಯತಾ ಪಡಿತರ ಚೀಟಿ ಪಡೆಯುವ ಪಟ್ಟಿಯಿಂದ ಹೊರಗಿರಲಿವೆ.
ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1,000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಆದ್ಯತಾ ಪಡಿತರ ಚೀಟಿ ಪಡೆಯುವಂತಿಲ್ಲ.
ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್, ಮಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿ ಹೊಂದಿದ ಕುಟುಂಬವನ್ನು ಹೊರತುಪಡಿಸಿ ಇತರ ನಾಲ್ಕ ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು ಮತ್ತು ಕುಟುಂಬದ ವಾರ್ಷಿಕ ಆದಾಯ 1.2 ಲಕ್ಷಗಳಿಗಿಂತ ಹೆಚ್ಚಿರುವ ಕುಟುಂಬಳು ಈ ಪಟ್ಟಿಯಿಂದ ಹೊರಗಿರಲಿವೆ. ಈ ವರ್ಗಗಳನ್ನು ಹೊರತುಪಡಿಸಿ ಬಡತನ ರೇಖೆಯಿಂದ ಕಳಗಿನವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ. ಆದರೆ, ಆದ್ಯೇತರ(ಎಪಿಎಲ್) ಪಡಿತರ ಚೀಟಿಗಳನ್ನು ಪಡೆಯಲು ಯಾವುದೇ ಮಾನದಂಡಗಳಿಲ್ಲ. ರಾಜ್ಯದಲ್ಲಿರುವ ಯಾವುದೇ ಕುಟುಂಬಗಳು ಆದ್ಯೇತರ ಪಡಿತರ ಚೀಟಿ ಪಡೆದುಕೊಳ್ಳಬಹುದಾಗಿದೆ.
ಬಿಪಿಎಲ್, ಅಂತ್ಯೋದಯ, ಎಪಿಎಲ್ ಪಡಿತರದಾರರಿಗೆ ನೀಡುತ್ತಿರುವ ಸೌಲಭ್ಯ: ಪ್ರತಿ ತಿಂಗಳು ಅಂತ್ಯೋದಯ ಅನ್ನ ಯೋಜನೆಯಡಿ ಪ್ರತಿ ಪಡಿತರ ಚೀಟಿಗೆ 3 ಕೆಜೆ ಆಹಾರ ಧಾನ್ಯ ನೀಡಲಾಗುತ್ತದೆ. ಆದ್ಯತಾ(ಪಿಹೆಚ್.ಹೆಚ್) ಪಡಿತರ ಚೀಟಿಯನ್ನು ಎರಡು ವರ್ಗಗಳಾಗಿ ವಿಂಗಡಿಸಿದ್ದು, ಪ್ರತಿ ಸದಸ್ಯರಿಗೆ 5 ಕೆಜಿ ಆಹಾರ ಧಾನ್ಯವನ್ನು 1 ರೂ, ಅಕ್ಕಿಗೆ ಪ್ರತಿ ಕೆಜಿಗೆ 3 ರೂ ಮತ್ತು ಗೋಧಿ ಪ್ರತಿ ಕೆಜಿಗೆ 2 ರೂಪಾಯಿಯಂತೆ ವಿತರಿಸಲಾಗುತ್ತದೆ. ಆದ್ಯೇತರ(ಎಪಿಎಲ್) ಏಕಸದಸ್ಯ ಪಡಿತರ ಚೀಟಿಗೆ 5 ಕೆಜಿ ಅಕ್ಕಿ ಮತ್ತು ಒಬ್ಬರಿಗಿಂತ ಹೆಚ್ಚು ಸದಸ್ಯರಿರುವ ಪಡಿತರ ಚೀಟಿಗೆ ಪ್ರತಿ ಕೆಜಿಗೆ 15 ರೂ.ನಂತೆ ಹಂಚಿಕೆ ಮಾಡಲಾಗುತ್ತಿದೆ.
ಪಡಿತರ ಚೀಟಿದಾರರ ಸಂಖ್ಯೆ: ರಾಜ್ಯದಲ್ಲಿನ ಅಂತ್ಯೋದಯ ಪಡಿತರ ಚೀಟಿ 1,0,92,473 ಇದ್ದು, 44,99,106 ಫಲಾನುಭವಿಗಳಿದ್ದಾರೆ. ಆದ್ಯತಾ ಪಡಿತರ ಚೀಟಿ ಸಂಖ್ಯೆ 1,16,09,661 ಇದ್ದು, 3,88,55,288 ಫಲಾನುಭವಿಗಳಿದ್ದಾರೆ. ಆದ್ಯೇತರ ಪಡಿತರ ಚೀಟಿ ಸಂಖ್ಯೆ 7,35,897 ಫಲಾನುಭವಿಗಳಿದ್ದಾರೆ.
ನಕಲಿ ಪಡಿತರ ಚೀಟಿ ವಿರುದ್ಧ ಕ್ರಮ : ರಾಜ್ಯ ಸರ್ಕಾರ ರೂಪಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಅಂತ್ಯೋದಯ, ಆದ್ಯತಾ ಪಡಿತರ ಚೀಟಿ ಪಡೆದುಕೊಂಡವರ ವಿರುದ್ಧ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುತ್ತಿದೆ ಮತ್ತು ದಂಡವನ್ನೂ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅನರ್ಹರು ಹೊಂದಿರುವ ಅಂತ್ಯೋದಯ, ಆದ್ಯತಾ ಪಡಿತರ ಚೀಟಿಯನ್ನು ಆದ್ಯೇತರ ಪಡಿತರ ಚೀಟಿಯನ್ನಾಗಿ ಪರಿವರ್ತಿಸುವ ಹಾಗು ರದ್ದುಪಡಿಸುವ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ 2021ರ ಜನವರಿ 30 ರಿಂದ 2022ರ ಆಗಸ್ಟ್ 31 ರವರೆಗೆ ಒಟ್ಟು 3,34,487 ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹೆಚ್ಚಿ 12,85,27,002 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ : ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಆದೇಶಕ್ಕೆ ಸರ್ಕಾರ ಬ್ರೇಕ್