ಬೆಂಗಳೂರು : ದೀರ್ಘಕಾಲದ ರಜೆಯಲ್ಲಿದ್ದ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಅವರನ್ನು ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಎರಡು ವರ್ಷದಿಂದ ಸುಧೀರ್ಘ ರಜೆಯ ಮೇಲಿದ್ದ ರಶ್ಮಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿ ನೇಮಿಸಲಾಗಿದೆ.
ಪಿಯು ಮಂಡಳಿಯಲ್ಲಿ ನಿರ್ದೇಶಕರಾಗಿದ್ದಾಗ ಮಂಡಳಿಯ ಅಕ್ರಮಗಳನ್ನು ಬಹಿರಂಗಪಡಿಸಿದ್ದರು. ಈ ಕಾರಣಕ್ಕಾಗಿ ಅವರನ್ನು ರಜೆ ಮೇಲೆ ಕಳುಹಿಸಿ ನಂತರ ಮೈಸೂರಿನ ಆಡಳಿತ ಮತ್ತು ತರಬೇತಿ ಕೇಂದ್ರದ ಆಯಕ್ತರಾಗಿ ವರ್ಗ ಮಾಡಲಾಗಿತ್ತು. ಅಲ್ಲಿಯೂ ತರಬೇತಿ ಕೇಂದ್ರದಲ್ಲಿ ಸುಮಾರು 100 ಕೋಟಿ ರೂ. ಹಗರಣ ಬೆಳಕಿಗೆ ತಂದಿದ್ದರು. ಈ ಕಾರಣಕ್ಕಾಗಿ ಅವರ ಮೇಲೆ ಹಲ್ಲೆಯೂ ನಡೆದಿತ್ತು.
ಬಳಿಕ ಅವರನ್ನು ಆಹಾರ ಸಂಸ್ಕರಣೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನ ಇಲಾಖೆಗೆ ವರ್ಗಾಯಿಸಲಾಯಿತು. ಕೆಲವೇ ದಿನಗಳಲ್ಲಿ ಬಿಬಿಎಂಪಿ ಹಣಕಾಸು ಮತ್ತು ಜಾಹೀರಾತು ವಿಭಾಗದ ಮುಖ್ಯಾಧಿಕಾರಿಯಾಗಿ ವರ್ಗ ಮಾಡಲಾಗಿತ್ತು. ನಂತರ ಸುದೀರ್ಘ ರಜೆ ಮೇಲೆ ತರಳಿದ್ದ ರಶ್ಮಿ ಮಹೇಶ್ ಕಾಣೆಯಾಗಿದ್ದಾರೆ ಎಂದು ಬಿಜೆಪಿ ಹೋರಾಟವನ್ನೇ ಮಾಡಿತ್ತು. ಬಳಿಕ ಸ್ವತಃ ರಶ್ಮಿ ಮಹೇಶ್ ಇದಕ್ಕೆ ಸ್ಪಷ್ಟೀಕರಣವನ್ನೂ ನೀಡಿದ್ದರು.